ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದ ಆವರಣದಲ್ಲಿ ಮಂಗಳವಾರ ತಡರಾತ್ರಿ ದುರ್ಘಟನೆ ನಡೆದಿದೆ.
ಅಯೋಧ್ಯೆಯ ದೇವಾಲಯದ ಆವರಣದಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ ಉತ್ತಪ್ರದೇಶ ವಿಶೇಷ ಭದ್ರತಾ ಪಡೆ ಯೋಧರೊಬ್ಬರಿಗೆ ಗುಂಡು ತಗುಲಿ ಅವರು ಮೃತಪಟ್ಟಿದ್ದಾರೆ.
ಯೋಧನ ಬಂದೂಕಿನಿಂದಲೇ ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ನಿವಾಸಿಯಾದ ಶತ್ರುಘ್ನ ವಿಶ್ವಕರ್ಮ (25) ಎಂಬ ಯೋಧ ಸಾವನ್ನಪ್ಪಿದ್ದಾನೆ. ಇವರು ಯುಪಿಎಸ್‌ಎಸ್‌ಎಫ್‌ನ ಪೇದೆಯಾಗಿದ್ದರು. ಮಂಗಳವಾರ ತಡರಾತ್ರಿ ಇವರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಅದು ಅವರಿಗೇ ತಗುಲಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದು, ಮೃತ ಯೋಧನ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಮಮಂದಿರ ಸಂಕೀರ್ಣದ 150 ಮೀಟರ್ ದೂರವಿರುವ ಕೋಟೇಶ್ವರ ದೇವಾಲಯದ ಎದುರು ವಿಐಪಿ ಗೇಟ್ ನಿರ್ಮಿಸಲಾಗುತ್ತಿದೆ. ಅಲ್ಲಿ ಶತ್ರುಘ್ನ ವಿಶ್ವಕರ್ಮ ಅವರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಹಲವು ಭದ್ರತಾ ಸಿಬ್ಬಂದಿ ಕೂಡ ರಾತ್ರಿ ಇದ್ದರು. ಇದೇ ವೇಳೆ ಗುಂಡು ಹಾರಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಭದ್ರತೆಗಾಗಿ ಯೋಗಿ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಎಸ್‌ಎಸ್‌ಎಫ್ ಪಡೆಯನ್ನು ರಚಿಸಿತ್ತು. ಘಟನೆಗೂ ಮುನ್ನ ಶತ್ರುಘ್ನ ಮೊಬೈಲ್ ನೋಡುತ್ತಿದ್ದ ಎಂದು ಮೃತ ಯೋಧನ ಸಹೋದ್ಯೋಗಿಗಳು ತಿಳಿಸಿದ್ದಾರೆ. ಅವರು ಕೆಲವು ದಿನಗಳಿಂದ ಯಾವುದೋ ಚಿಂತೆಯಲ್ಲಿದ್ದರು ಎಂಬುದಾಗಿ ತಿಳಿಸಿದ್ದಾರೆ. ಪೊಲೀಸರು ಅವರ ಮೊಬೈಲ್ ಅನ್ನು ಕೂಡ ವಿಚಾರಣೆಗೆ ಕಳುಹಿಸಿದ್ದಾರೆ. ಮೃತ ಯೋಧನ ಕುಟುಂಬಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಸ್ಥಳಕ್ಕೆ ತಲುಪಿದ್ದಾರೆ.
ರಾಮಮಂದಿರದಲ್ಲಿ ಇತ್ತೀಚೆಗೆ ನಡೆದ ಎರಡನೇ ಪ್ರಕರಣ ಇದಾಗಿದೆ. ಕಳೆದ ಮಾರ್ಚ್‌ನಲ್ಲಿ, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC) ಕಮಾಂಡೋ ತನ್ನ ಪೋಸ್ಟ್‌ನಲ್ಲಿ ತನ್ನ ಶಸ್ತ್ರಾಸ್ತ್ರವನ್ನು ಸ್ವಚ್ಛಗೊಳಿಸುತ್ತಿದ್ದಾಗ ‘ಆಕಸ್ಮಿಕವಾಗಿ ಸಂಭವಿಸಿದ ಗುಂಡಿ ಸ್ಫೂಟದಲ್ಲಿ ಓರ್ವ ಯೋಧ ಗಾಯಗೊಂಡಿದ್ದರು.