ಆಲಂಕಾರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶ್ರೀಭಾರತಿ ವಿದ್ಯಾಸಂಸ್ಥೆಯ ಮಾಧವ ಸಭಾಭವನದಲ್ಲಿ ಜೂ.21ರಂದು ಸುಮಾರು 300ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ, ವಿವಿಧ ಯೋಗಾಸನಗಳು, ಯೋಗ ರಿಧಮಿಕ್ ಪ್ರದರ್ಶನ ನಡೆಯಿತು.
ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಗಂಗಾಧರ ಗೌಡ ಕುಂಡಡ್ಕ ವಹಿಸಿದ್ದರು. ಮುಖ್ಯ ಅತಿಥಿ ಬೃಂದಾ ಪ್ರಮೋದ್ ಕುಮಾರ್ ಮಾತನಾಡಿ ಸುಮಾರು 84 ಲಕ್ಷ ಯೋಗಾಸನಗಳು ಇವೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಈ ಆಸನಗಳ ಯೋಗಸಾಧಕರಾಗಿ ಎಂದು ಶುಭಹಾರೈಸಿದರು. ಯೋಗಾಸನ ಮಾಡುವಾಗ ಯೋಗಪಟುಗಳು ವಹಿಸಬೇಕಾದ ಎಚ್ಚರಿಕೆಗಳನ್ನು ಮಕ್ಕಳ ಗಮನಕ್ಕೆ ತಲುಪಿಸಿದರು.
ಪತ್ರಕರ್ತ ಮತ್ತು ಯೋಗ ಪ್ರಮುಖ ಸದಾಶಿವ ಶೆಟ್ಟಿ ಮಾರಂಗ ಅತಿಥಿಯಾಗಿ ಮಾತನಾಡಿ ಯೋಗ ಶಿವನಿಂದ ಪಾರ್ವತಿಗೆ ಅಲ್ಲಿಂದ ಪತಂಜಲಿಗೆ ಆ ಮೂಲಕ ಭಾರತೀಯರಿಗೆ ದೊರೆತ ಅಮೂಲ್ಯ ರತ್ನವಾಗಿದೆ ಎಂದರು. ಇಂದು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳ ಮೂಲಕ ಜಗದ್ವಿಖ್ಯಾತವಾಗಿದೆ ಎಂದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಇಂದುಶೇಖರ ಶೆಟ್ಟಿ ಬರೆಪುದೇಲು ಮತ್ತು ಸತೀಶ್ ಕುಮಾರ್ ಜಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಮತ್ತು ಅನಿತಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುವಲ್ಲಿ ಸಹಕರಿಸಿದರು.
ಕು.ಜಯಶ್ರೀ ಪ್ರಾರ್ಥಿಸಿದರು. ಆಶಾ.ಎಸ್.ರೈ ಸ್ವಾಗತಿಸಿ, ಶ್ರೀಮತಿ ಸುಪ್ರಿತಾ ವಂದಿಸಿದರು. ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶಿಕ್ಷಕಿಯರು, ಶಾಲಾ ಆಡಳಿತ ಮಂಡಳಿಯ ಹಿರಿಯರು, ವಿದ್ಯಾರ್ಥಿವೃಂದ, ಪಾಲಕರು ಉಪಸ್ಥಿತರಿದ್ದರು.