ನೆಲ್ಯಾಡಿ: ಯುವಕರು ವಿವಿಧ ಕಾರಣಗಳಿಂದ ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ದ್ರವ್ಯಗಳ ಪಿಡುಗು ಸಮಾಜದಲ್ಲಿ ಆಳವಾಗಿ ಬೇರೂರಿದೆ. ಇದರಿಂದಾಗಿ ಬಹುತೇಕ ಇಡೀ ಪೀಳಿಗೆಯು ವಿನಾಶದತ್ತ ಸಾಗುತ್ತಿದೆ. ಮಾದಕ ವ್ಯಸನ ಮತ್ತು ದುರುಪಯೋಗದ ಹಿಡಿತದಿಂದ ಜನರನ್ನು ರಕ್ಷಿಸಲು, ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂನ್ 26ರಂದು ಅಂತಾರಾಷ್ಟ್ರೀಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರಾ ಅವರು ಹೇಳಿದರು.
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಜೂ.26ರಂದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇತ್ತೀಚಿನ ದಿನದಲ್ಲಿ ಅನೇಕ ಯುವಕ ಮತ್ತು ಯುವತಿಯರು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗಿದ್ದಾರೆ. ಹದಿಹರೆಯದವರಲ್ಲಿ ಮಾದಕ ವ್ಯಸನದ ಚಟ ಹೆಚ್ಚುತ್ತಿದ್ದು, ಸಮಾಜದ ನಿರ್ಲಕ್ಷ್ಯದಿಂದಾಗಿ ಇಂದು ಯುವ ಜನತೆ ಹೆಚ್ಚೆಚ್ಚು ಈ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದು ಯುವ ಜನತೆಯ ಆರೋಗ್ಯ ಮತ್ತು ವೃತ್ತಿ ಜೀವನದ ಮೇಲೆ ಜೊತೆಗೆ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮನುಕುಲದ ಉತ್ತಮ ಭವಿಷ್ಯಕ್ಕಾಗಿ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ನಿಲ್ಲಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಮಾದಕ ವ್ಯಸನದ ಹೊರತಾಗಿ ವಿವಿಧ ವ್ಯಸನಗಳ ಬಗ್ಗೆ ಚರ್ಚಿಸಲು ದಿನವು ವೇದಿಕೆಯನ್ನು ಒದಗಿಸುತ್ತದೆ. ಭಾರತವು ಮಾದಕ ದ್ರವ್ಯ ಮತ್ತು ಅಕ್ರಮ ಸಾಗಣೆಯನ್ನು ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ.
ಮಾದಕ ದ್ರವ್ಯಗಳ ಕಳ್ಳ ಸಾಗಣೆ ಸಮಾಜದಲ್ಲಿ ದೊಡ್ಡ ಪಿಡುಗಾಗಿದೆ. ಇವುಗಳ ದೀರ್ಘಾವಧಿ ಬಳಕೆ ಕಳಪೆ ಆರೋಗ್ಯ, ಮಾನಸಿಕ ಅಸ್ವಸ್ಥತೆ, ಸಾವಿಗೆ ಕಾರಣವಾಗುತ್ತದೆ. ಇದು ಕೇವಲ ಸೇವನೆ ಮಾಡುವವರ ಮೇಲೆ ಮಾತ್ರವಲ್ಲದೇ ಸಮಾಜನ ಮೇಲೆ ಕೂಡ ಭಾರೀ ಪರಿಣಾಮ ಹೊಂದಿದೆ. ಇದು ಸಾಮಾಜಿಕವಾಗಿ, ದೈಹಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹಾಳುಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಅನ್ನಮ್ಮ ಸ್ವಾಗತಿಸಿದರು, ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ ವಂದಿಸಿದರು.