ಶಿಕ್ಷಣವೇ ಶಕ್ತಿ ಶಿಕ್ಷಣವೇ ಯುಕ್ತಿ. ಜೀವನದ ಉನ್ನತ ಸಾಧನೆಗೆ ಜ್ಞಾನವೇ ಅಡಿಪಾಯ. ಕದಿಯಲಾರದ ಈ ಸಂಪತ್ತಿನಿಂದ ಏನನ್ನಾದರೂ ಸಾಧಿಸಬಹುದು. ಹಾಗಾಗಿ ಮಕ್ಕಳು ಜ್ಞಾನವಂತರಾಗಬೇಕು ಜ್ಞಾನಾರ್ಜನೆಗೆ ಸತತ ಓದಬೇಕು ಓದೇ ಜೀವನದ ಉನ್ನತ ಸಾಧನಾ ಶಿಖರಕ್ಕೆ ದಾರಿ. ಪರ್ಯಾಯ ಮಾರ್ಗವೇ ಇಲ್ಲ. ಪ್ರತಿಯೊಂದು ಸಾಧನೆ ಶ್ರಮದಿಂದಲೇ ಸಾಧಿತವಾಗುತ್ತದೆ. ಛಲ. ಆತ್ಮ ವಿಶ್ವಾಸ ಮತ್ತು ಅಚಲವಾದ ಗುರಿಯೊಂದಿದ್ದರೆ ಎಂತಹ ಹುದ್ದೆಯನ್ನಾದರೂ ದಕ್ಕಿಸಿಕೊಳ್ಳಬಹುದು. ಅಂತ ಪರಿಶ್ರಮದಿಂದಲೇ ಬಡ ಕುಟುಂಬದಿಂದ ಬಂದ ನಾನು ಇಂದು ತಾಲೂಕ ದಂಡಾಧಾಕಾರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಹೆತ್ತ ತಂದೆ ತಾಯಿಯರ ಹಾಗೂ ಹುಟ್ಟಿದ ಊರಿನ ಋಣ ತೀರಿಸುವ ಪ್ರಯತ್ನ ಮಾಡುತ್ತಿರುವೆ. ನೀವು ಕೂಡ ಸತತ ಓದಿನಿಂದ ನನಗಿಂತ ಉನ್ನತ ಹುದ್ದೆಯನ್ನು ಪಡೆದು ಊರಿಗೆ ಗೌರವ ತನ್ನಿ. ಎಂದು ಬ್ಯಾಡಗಿ ತಾಲೂಕಿನ ತಹಸಿಲ್ದಾರರಾದ ಫಿರೋಜ್ ಷಾ ಅ.ಸೋಮನಕಟ್ಟಿ ಅವರು ನುಡಿದರು.
ರಾಣೇಬೆನ್ನೂರು ತಾಲೂಕಿನ ಸರಕಾರಿ ಪ್ರೌಢಶಾಲೆ, ಹನುಮಾಪುರದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ಸಭೆ, ಶಾಲಾ ಸಂಸತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ ಫಿರೋಜ್ ಷಾ ಅವರು ಮೂಲತಃ ಅದೇ ಊರಿನವರಾಗಿದ್ದು ಮಕ್ಕಳು ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಕಲಿಕಾ ಚೇತನಕ್ಕೆ ಪ್ರೇರಣಾತ್ಮಕ ನುಡಿಗಳನ್ನಾಡಿದರು.
ಜಿಲ್ಲಾ ಶಿಕ್ಷಣ ಇಲಾಖೆಯ ಸಮಾಜ ವಿಜ್ಞಾನ ವಿಷಯ ಪರಿವೀಕ್ಷರಾದ ಮಂಜಪ್ಪ ಅವರು ಮಾತನಾಡಿ ಮಕ್ಕಳು ರಾಷ್ಟೃದ ಸಂಪತ್ತು. ಆ ಸಂಪತ್ತು ಬಲಿಷ್ಠವಾಗಿರಬೇಕು. ಕ್ರಿಯಾಶೀಲವಾಗಿರಬೇಕು. ಸಂಸ್ಕಾರಯುತವಾಗಿರಬೇಕು. ಕನಸುಗಳನ್ನು ನನಸು ಮಾಡುವ ಇಚ್ಚಾಶಕ್ತಿ ಹೊಂದಿರಬೇಕು ಅಂತಹ ಸಂಪತ್ತಿಗೆ ಸನ್ಮಾರ್ಗ ನೀಡಿ ಸಂಸ್ಕಾರ ಕಲಿಸುವ ಗುರು ಬಳಗವಿದೆ ಅವರ ಮಾರ್ಗದರ್ಶನ ಪಡೆಯಬೇಕು ಎಂದರು. ಸಂಸ್ಕಾರಯುತ ಶಿಕ್ಷಣವೇ ಜೀವನದ ಉನ್ನತ ಸಾಧನೆಗೆ ಸಾಧನಾ. ಮಕ್ಕಳ ಈ ಸಾಧನೆಗೆ ಪ್ರೇರಣೆ ನೀಡಬೇಕು. ಮಕ್ಕಳು ಕನಸು ಕಾಣುವಂತೆ ಪ್ರೇರೇಪಿಸಬೇಕು. ಅವರ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಆಶೋತ್ತರಗಳನ್ನು ತ್ಯಾಗ ಮಾಡಬೇಕು. ಕೀಳಿರಿಮೆಯನ್ನು ಬಿಟ್ಟು ಮುಕ್ತವಾಗಿ ಬದುವಂತೆ ಮಕ್ಕಳಿಗೆ ಪಾಲಕರಾದವರು ಧೈರ್ಯ ತುಂಬಬೇಕು ದೀಪಗಳಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾಗದು. ಬಯಲಲ್ಲಿ ಬಯಲ ಬಿಟ್ಟು ಬಯಲ ಹುಡುಕುವಂತ ಜೀವನವನ್ನು ಬಿಟ್ಟು ಬಯಲಲ್ಲಿ ಬಯಲನ್ನೇ ಅಪ್ಪಿಕೊಳ್ಳಬೇಕು. ಬಡವನಾಗಿ ಹುಟ್ಟುವುದು ತಪ್ಪಲ್ಲ. ಬಡವನಾಗಿ ಸಾಯುವುದು ತಪ್ಪು ಎಂಬ ಜೀವನ ಪ್ರೇರಕ ಮಾತುಗಳನ್ನಾಡಿದರು.
ಮುಖ್ಯ ಗುರುಗಳಾದ ಸಿ.ಎಸ್ ಭಗವಂತಗೌಡರು ಮಕ್ಕಳ ಸರ್ವತೋಮುಖ ಪ್ರಗತಿಗೆ ಸದಾ ಬೆನ್ನೆಲುಬಾಗಿರಬೇಕು. ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಮಕ್ಕಳ ಕಲಿಕೆಯ ಮೇಲೆ ನಿಗಾ ಇಡಬೇಕು ಎಂದರು. ಮುಖ್ಯ ಅಥಿತಿಗಳಾಗಿ ಬಸವರಾಜ ಕುಸುನೂರು, ಗೋಪಾಲ ಅಂತರವಳ್ಳಿ, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸದಸ್ಯರಾದ ಶ್ರೀಮತಿ ರವರು ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷರಾದ ಮಹಾಂತೇಶ ಕಂಬಳಿಯವರು ವಹಿಸಿದ್ದರು. ಕಾರ್ಯಕ್ರವನ್ನು ಸರಸ್ವತಿ ಮತ್ತು ಸಂಗಡಿಗರು ಪ್ರಾರ್ಥನೆಯ ಮೂಲಕ ಆರಂಭಿಸಿದರು. ಎಂ ವೈ ದೇಸೂರು ಸ್ವಾಗತಿಸಿದರು. ಸಭಾ ಕಾರ್ಯಕ್ರಮದಲ್ಲಿ ನೂತನವಾಗಿ ಆಗಮಿಸಿದ ವಿದ್ಯಾರ್ಥಿಗಳನ್ನು ಹೂ ನೀಡುವ ಮೂಲಕ ಸ್ವಾಗತಿಸಲಾಯಿತು. ಈ ಕಾರ್ಯಕ್ರಮವನ್ನು ಹರಿಹರದ ಗೀರೀಶ್ ಗುರುಗಳು ನಡೆಸಿಕೊಟ್ಟರು. ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸೌಮ್ಯ ಕತ್ತಿ. ಈರಮ್ಮ ಅಂತರವಳ್ಳಿ ಹಾಗೂ ರತ್ನಾ ನೆಲೋಗಲ್ ಇವರನ್ನು ಸನ್ಮಾನಿಸಲಾಯಿತು. ನಿಂಗನಗೌಡ ಪಾಟಿಲ್ ಅವರು ನೆರವೇರಿಸಿದರು. ನೂತನವಾಗಿ ಅಸ್ತಿತ್ವಕ್ಕೆ ಬಂದ ಶಾಲಾ ಸಂಸತ್ತು ಪದಾಧಿಕಾರಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಅಭಿನಂದಿಸಲಾಯಿತು. ಈ ಕಾರ್ಯವನ್ನು ಜಗದೀಶ್ ತೋಟಗೇರ ಅವರು ನಿರ್ವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವೆಂಕಟೇಶ ಈಡಿಗರ ಅವರು ನೆರವೇರಿಸಿದರು.