ಬೆಳ್ತಂಗಡಿ ವಲಯದ ಗೊಲ್ಲ(ಯಾದವ) ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

ಶೇರ್ ಮಾಡಿ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ(ಯಾದವ) ಸಮಾಜ ಸೇವಾ ಸಂಘ ಮಂಗಳೂರು ಇವರ ಬೆಳ್ತಂಗಡಿ ವಲಯದ ಪ್ರಥಮ ವರ್ಷದ ವಾರ್ಷಿಕ ಮಹಾಸಭೆಯು ಕಾಶಿಪಟ್ಣ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜು.7ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಮಂಗಳೂರು ಗೊಲ್ಲ(ಯಾದವ) ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಯು.ಎನ್.ಪ್ರಮೋದ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗೊಲ್ಲ(ಯಾದವ) ಸಮುದಾಯದ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿದಾಗ ನಾವು ದುರ್ಬಲರಲ್ಲ, ಅತ್ಯಂತ ಶ್ರೇಷ್ಠವಾದ, ಇಡೀ ವಿಶ್ವಕ್ಕೆ ಅತ್ಯಮೂಲ್ಯವಾದ ಗ್ರಂಥ ಭಗವದ್ಗೀತೆಯನ್ನು ನೀಡಿದ ಸಮುದಾಯ ನಮ್ಮದು. ಇದರಲ್ಲಿ ಒಬ್ಬ ವ್ಯಕ್ತಿಯ ಬದುಕಿಗೆ ಬೇಡ ಎನ್ನುವುದು ಯಾವುದು ಸಿಗುವುದಿಲ್ಲ. ನಾವುಗಳು ಸಾಮಾಜಿಕವಾಗಿ ಹಿಂದುಳಿದಿರ ಬಹುದು. ನಮ್ಮಲ್ಲಿ ಛಲ ಬಂದಾಗ ನಾವುಗಳು ಅದನ್ನು ಮಕ್ಕಳಲ್ಲಿ ಬೀಜ ಬಿತ್ತಬೇಕು. ಮಕ್ಕಳನ್ನು ಆಸ್ತಿವಂತರನ್ನಾಗಿ ಮಾಡಿ, ಅವರಿಗೆ ಒಳ್ಳೆಯ ದಾರಿ ತೋರಿಸಬೇಕು. ನಾವುಗಳು ಹೋಗುವ ದಾರಿ ಬಹಳಷ್ಟು ಮುಖ್ಯ. ನಮಗೆ ಬೇಕಾಗಿರುವುದು ಒಳ್ಳೆಯ ದಾರಿ. ಒಡೆದ ಮನಸ್ಸುಗಳಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ. ನಮ್ಮ ಇಡಿ ಸಮುದಾಯದಲ್ಲಿ ಒಗ್ಗಟ್ಟ ಇರಬೇಕು, ಎಲ್ಲರಲ್ಲಿ ಒಳ್ಳೆಯ ಮನೋಭಾವ ಬರಬೇಕು. “ನಾವು ಬೆಳೆಯುತ್ತೇವೆ, ನೀವು ಬೆಳೆಯಬೇಕು” ಎಂಬ ಭಾವನೆ ಇರಬೇಕು. ನಾವುಗಳು ಜ್ಞಾನಕ್ಕೆ, ಆದರ್ಶಕ್ಕೆ, ನೈತಿಕತೆಗೆ, ಆಸ್ತಿವಂತರು ಆಗಿರಬೇಕು. ಗೊಲ್ಲ(ಯಾದವ) ಸಮಾಜದವರಲ್ಲಿ ಹಿಂದುಳಿದ ಮನೋಭಾವ ಬರಬಾರದು. ಎಲ್ಲರಿಗೂ ಒಳ್ಳೆಯ ಶಿಕ್ಷಣ ಸಿಗುವಂತಾಗಬೇಕು ಎಂದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ವಲಯದ ಗೊಲ್ಲ(ಯಾದವ) ಸಮಾಜ ಸೇವಾ ಸಂಘದ ಅಧ್ಯಕ್ಷ ಎಚ್. ರತ್ನಾಕರ್ ರಾವ್ ವಹಿಸಿದ್ದರು.

ಮಂಗಳೂರು ಗೊಲ್ಲ(ಯಾದವ) ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಟಿ.ಆರ್.ಕುಮಾರಸ್ವಾಮಿ, ಉಪಾಧ್ಯಕ್ಷ ವಿಜಯಕುಮಾರ್ ಮೂಡುಬಿದ್ರೆ, ಬೆಳ್ತಂಗಡಿ ಮಾಜಿ ತಾಲೂಕು ಪಂಚಾಯಿತಿನ ಅಧ್ಯಕ್ಷ ಶ್ರೀನಿವಾಸ ರಾವ್ ಅಳದಂಗಡಿ, ಕಾಶಿಪಟ್ಣ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟರಮಣ ಗೊಲ್ಲ, ಉದ್ಯಮಿ ರಮೇಶ್ ರಾವ್ ಮೂಡುಬಿದ್ರೆ, ಬೆಳ್ತಂಗಡಿ ವಲಯದ ಗೊಲ್ಲ(ಯಾದವ) ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ರಾಜೇಶ್ ರಾವ್ ಉಪಸ್ಥಿತರಿದ್ದರು.

ಸನ್ಮಾನ:
2023-24ನೇ ಸಾಲಿನ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಪದವಿ ತರಗತಿಯಲ್ಲಿ ಗರಿಷ್ಠ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.
ಯು.ಎನ್ ಪ್ರಮೋದ್ ಕುಮಾರ್ ರಾವ್ ಹಾಗೂ ಹಿರಿಯ ಪಶು ವೈದ್ಯಾಧಿಕಾರಿ ಡಾ. ವಿನಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು

ಸಾಮೂಹಿಕ ಉಪನಯನ:
ಸ್ವಜಾತಿಬಾಂಧವ ವಟುಗಳಿಗೆ ಸಂಘದ ವತಿಯಿಂದ ಸಾಮೂಹಿಕ ಉಪನಯನ ಶಸ್ತ್ರೋಕ್ತವಾಗಿ ಮಾಡಲಾಯಿತು.

ಸಂಘದ ಕಾರ್ಯದರ್ಶಿ ರಾಜೇಶ್ ಕಾಶಿಪಟ್ಣ, ಕೋಶಾಧಿಕಾರಿ ರಮನಂದ.ಕೆ ಉಜಿರೆ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶರ್ಮಿಳಾ. ಎಂ ಸ್ವಾಗತಿಸಿದರು. ವಿಧ್ಯಾಲತ.ಎಂ.ಕೆ ನಿರೂಪಿಸಿದರು. ಸುಭಾಷ್ ಚಂದ್ರ.ಕೆ ವಂದಿಸಿದರು.

Leave a Reply

error: Content is protected !!