ಪುತ್ತೂರು: ಹೂಡಿಕೆಗೆ ಸಂಬಂಧಿಸಿ ವಾಟ್ಸಪ್ನಲ್ಲಿ ಬಂದ ಮಾಹಿತಿಯನ್ನು ನಂಬಿ ಹಣ ಹೂಡಿಕೆ ಮಾಡಿದ ಪುತ್ತೂರಿನ ವ್ಯಕ್ತಿಯೋರ್ವ 22 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಪುತ್ತೂರು ನಿವಾಸಿ ಜಾನ್ ಪ್ರವೀಣ್ ಮಾಡ್ತ (46) ಹಣ ಕಳೆದುಕೊಂಡವರು. ವಾಟ್ಸಪ್ನಲ್ಲಿ ಬಂದ ಎಸಿವಿವಿಎಲ್ ಆನ್ಲೈನ್ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿ ಅದರಲ್ಲಿ ಸೂಚಿಸಲಾದ ವಿವಿಧ ಬ್ಯಾಂಕ್ ಖಾತೆಗಳಿಗೆ ತನ್ನ ಮತ್ತು ಪತ್ನಿಯ ಬ್ಯಾಂಕ್ ಖಾತೆಯಿಂದ ಹಂತ-ಹಂತವಾಗಿ ಹಣ ವರ್ಗಾಯಿಸಿದ್ದಾರೆ.
ಒಂದು ಹಂತದಲ್ಲಿ 21 ಸಾವಿರ ರೂ. ಲಾಭಾಂಶವಾಗಿ ಖಾತೆಗೆ ಜಮೆ ಆಗಿತ್ತು. ಹೂಡಿಕೆ ಮಾಡಿದ ಹಣದ ಮೊತ್ತವು ಆ್ಯಪ್ನಲ್ಲಿ ನಮೂದಾಗಿದ್ದ ಕಾರಣ ಯಾವುದೇ ಸಂಶಯಕ್ಕೆ ಒಳಗಾಗದೆ ನಿರಂತರವಾಗಿ ಹಣ ಹೂಡಿಕೆ ಮಾಡಿದ್ದಾರೆ. ಹೂಡಿಕೆಯ ಮೊತ್ತ 22,35,000 ರೂ.ಗೆ ತಲುಪಿದಾಗ ತಾನು ಮೋಸ ಹೋಗಿರುವುದು ಗಮನಕ್ಕೆ ಬಂದಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.