ನೆಲ್ಯಾಡಿ: ರಾಹುಲ್ ಗಾಂಧಿ ಅವಮಾನಿಸಿ ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿದ ಆರೋಪ; ಸಿಬ್ಬಂದಿ ವಜಾಗೊಳಿಸಲು ನಿರ್ಣಯ

ಶೇರ್ ಮಾಡಿ

ನೆಲ್ಯಾಡಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಅವಹೇಳನ ಮಾಡಿರುವ ವಿಡಿಯೋವನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿದ ಆರೋಪದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ವಜಾಗೊಳಿಸಲು ನೆಲ್ಯಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಜು.23ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ಸಿಬ್ಬಂದಿ ಗಿರೀಶ್ ಅವರು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಅವಮಾನಿಸುವ ವಿಡಿಯೋವೊಂದನ್ನು ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹಾಗೂ ಎನ್‌ಎಸ್‌ಯುಐ ಸಂಘಟನೆಯಿಂದ ಗ್ರಾಮ ಪಂಚಾಯಿತಿಗೆ ಬಂದಿರುವ ಅರ್ಜಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಮಹಮ್ಮದ್ ಇಕ್ಬಾಲ್ ಅವರು, ಸಿಬ್ಬಂದಿ ಗಿರೀಶ್ ಅವರ ಈ ವರ್ತನೆಯಿಂದ ಸದಸ್ಯರು ಮುಜುಗರ ಅನುಭವಿಸುವಂತಾಗಿದೆ. ಬೆಳಿಗ್ಗೆ ಸ್ಟೇಟಸ್ ಹಾಕಿದ ತಕ್ಷಣ ಅವರ ಗಮನಕ್ಕೆ ತಂದರೂ ಸಂಜೆ ತನಕವೂ ಅವರು ಡಿಲೀಟ್ ಮಾಡಿಕೊಳ್ಳದೇ ಸುಳ್ಳು ಸುದ್ದಿಯನ್ನೇ ಸಮರ್ಥಿಸಿಕೊಂಡಿದ್ದಾರೆ. ಈ ಘಟನೆ ಬಗ್ಗೆ ತಾ.ಪಂ., ಜಿ.ಪಂ.ನ ಹಿರಿಯ ಅಧಿಕಾರಿಗಳ, ಉಸ್ತುವಾರಿ ಸಚಿವರ ತನಕ ದೂರು ಹೋಗಿದೆ. ಅಲ್ಲದೇ ಘಟನೆ ನಡೆದು 1 ತಿಂಗಳು ಆದರೂ ಕ್ಷಮೆಯಾಚಿಸುವಲ್ಲಿಯೂ ಅಸಡ್ಡೆ ವಹಿಸಿದ್ದಾರೆ ಎಂದು ಆರೋಪಿಸಿದರು. ಉಪಾಧ್ಯಕ್ಷೆ ರೇಷ್ಮಾಶಶಿ ಅವರು ಮಾತನಾಡಿ, ಸಿಬ್ಬಂದಿ ಗಿರೀಶ್ ಅವರ ವಿರುದ್ಧ ಈ ಹಿಂದೆ ಸಾರ್ವಜನಿಕರಿಂದಲೂ ದೂರು ಬಂದಿದೆ. ತಾನು ಮಾಡಬೇಕಾದ ಕೆಲಸಕ್ಕೆ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳನ್ನು ಮನೆ ಮನೆಗೆ ಕಳಿಸಿ ಸರ್ವೆ ನಡೆಸಿದ್ದಾರೆ. ಈ ಬಗ್ಗೆ ಅವರಲ್ಲಿ ಪ್ರಶ್ನಿಸಿರುವುದಕ್ಕೆ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ನಮ್ಮ ವಿರುದ್ಧವೇ ಧರಣಿಗೆ ಮುಂದಾಗಿದ್ದಾರೆ. ಸದಸ್ಯರ ಬಗ್ಗೆ ಅವರಿಗೆ ಗೌರವವೇ ಇಲ್ಲ ಎಂದು ಆರೋಪಿಸಿದರು. ಸದಸ್ಯರಾದ ಅಬ್ದುಲ್ ಜಬ್ಬಾರ್, ಉಷಾಜೋಯಿ ಅವರೂ ಗಿರೀಶ್ ಅವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಕಣ್ತಪ್ಪಿನಿಂದ ಆಗಿದೆ:
ಪಿಡಿಒ ಮೋಹನ್‌ಕುಮಾರ್ ಅವರು ಮಾತನಾಡಿ, ಪ್ರಕರಣದ ಕುರಿತು ಪಂಚಾಯತ್‌ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಸಿಬ್ಬಂದಿ ಗಿರೀಶ್ ಅವರಿಗೆ ನೋಟಿಸ್ ನೀಡಲಾಗಿದ್ದು ಅವರಿಂದ ಉತ್ತರವೂ ಬಂದಿದೆ ಎಂದರು. ಬಳಿಕ ಗಿರೀಶ್ ಅವರ ಪತ್ರವನ್ನು ಲೆಕ್ಕಸಹಾಯಕ ಅಂಗು ಅವರು ಸಭೆಯಲ್ಲಿ ಓದಿದರು. ನಾನು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಈ ಘಟನೆ ಕಣ್ತಪ್ಪಿನಿಂದ ಆಗಿರುತ್ತದೆ. ರಾಹುಲ್ ಗಾಂಧಿಯವರನ್ನು ನಿಂದಿಸುವ ಅಥವಾ ಅವಹೇಳನ ಮಾಡುವ ಉದ್ದೇಶವಿರಲಿಲ್ಲ ಎಂದು ಗಿರೀಶ್ ಅವರು ಪತ್ರದಲ್ಲಿ ತಿಳಿಸಿದ್ದರು. ಬಳಿಕ ಮಾತನಾಡಿದ ಅಧ್ಯಕ್ಷ ಸಲಾಂ ಬಿಲಾಲ್ ಅವರು, ಗಿರೀಶ್ ಅವರ ಗಮನಕ್ಕೆ ತರಲಾದರೂ ಅವರು ಸ್ಟೇಟಸ್ ಡಿಲೀಟ್ ಮಾಡಿಲ್ಲ. ಸ್ಪಷ್ಟೀಕರಣವೂ ನೀಡಿಲ್ಲ. ಅಲ್ಲದೇ ಅವರ ವಿರುದ್ಧ ನಾಲ್ಕೈದು ಆರೋಪಗಳೂ ಇವೆ. ಆದ್ದರಿಂದ ಅವರನ್ನು ಕೆಲಸದಿಂದ ವಜಾಗೊಳಿಸುವ ನಿರ್ಣಯ ಕೈಗೊಳ್ಳಬೇಕೆಂದು ಹೇಳಿದರು. ಇದಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರೂ ಬೆಂಬಲ ಸೂಚಿಸಿದರು. ಪಿಡಿಒ ಮೋಹನ್‌ಕುಮಾರ್ ಅವರು ಪ್ರಕರಣದ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಎಂದು ಹೇಳಿದರೂ ಸದಸ್ಯರು ಒಪ್ಪಲಿಲ್ಲ. ವಜಾಗೊಳಿಸದೇ ಇದ್ದಲ್ಲಿ ಜನರೇ ಬಂದು ಪಂಚಾಯತ್ ಮುಂದೆ ಧರಣಿ ನಡೆಸುತ್ತಾರೆ. ಆ ರೀತಿಯಾದಲ್ಲಿ ಏನು ಮಾಡುವುದು ಎಂದು ಪ್ರಶ್ನಿಸಿ ವಜಾಗೊಳಿಸುವ ನಿರ್ಣಯ ಬರೆಯುವಂತೆ ಪಟ್ಟು ಹಿಡಿದರು.

ವಜಾಗೊಳಿಸುವುದಕ್ಕೆ ಒಪ್ಪಿಗೆ ಇಲ್ಲ:
ಬಿಜೆಪಿ ಬೆಂಬಲಿತ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪ್ರಕಾಶ್ ಪೂಜಾರಿ ಅವರು ಮಾತನಾಡಿ, ಆಪಾದಿತ ಸಿಬ್ಬಂದಿಯನ್ನು ಕರೆಸಿ ಕ್ಷಮೆ ಕೇಳಿಸುವ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ. ಕೆಲಸದಿಂದ ವಜಾಗೊಳಿಸುವುದು ಬೇಡ ಎಂದರು. ಆದರೆ ಇದಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ಕಾಂಗ್ರೆಸ್ ಬೆಂಬಲಿತ 7ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸಿಬ್ಬಂದಿ ಗಿರೀಶ್ ಅವರನ್ನು ವಜಾಗೊಳಿಸುವ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಳಿಕ ಸಿಬ್ಬಂದಿಯನ್ನು ವಜಾಗೊಳಿಸುವ ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಸಹಿತ ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಒಪ್ಪಿಗೆ ಸೂಚಿಸಿದ್ದು, ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಬೆಂಬಲಿತ ನಾಲ್ವರು ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಕ್ರೀಯಾಯೋಜನೆ ತಯಾರಿ:
ಸಭೆಯಲ್ಲಿ ನಿಧಿ 1 ಹಾಗೂ 15ನೇ ಹಣಕಾಸು ಯೋಜನೆಯ ಕ್ರೀಯಾಯೋಜನೆ ತಯಾರಿ ಮಾಡಲಾಯಿತು. ಗ್ರಾಮಸಭೆ ದಿನಾಂಕ ನಿಗದಿಗೊಳಿಸಿ ಸಭೆಗೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂದು ಸದಸ್ಯರು ಒತ್ತಾಯಿಸಿದರು.
ಸಂಜೀವಿನಿ ಒಕ್ಕೂಟದ ಸದಸ್ಯರೊಂದಿಗೆ ಚರ್ಚೆ:
ಘನತ್ಯಾಜ್ಯ ವಿಲೇವಾರಿ ಕುರಿತಂತೆ ಸಂಜೀವಿನಿ ಒಕ್ಕೂಟದ ಸದಸ್ಯರೊಂದಿಗೆ ಘನತ್ಯಾಜ್ಯ ವಿಲೇವಾರಿ ಕುರಿತಂತೆ ಚರ್ಚಿಸಲಾಯಿತು. ಒಕ್ಕೂಟದ ಸದಸ್ಯರು ಮಾಹಿತಿ ನೀಡಿದರು.

ಅಧ್ಯಕ್ಷ ಯಾಕೂಬು ಯಾನೆ ಸಲಾಂ ಬಿಲಾಲ್, ಉಪಾಧ್ಯಕ್ಷೆ ರೇಷ್ಮಾ ಶಶಿ, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಅಬ್ದುಲ್ ಜಬ್ಬಾರ್, ಪ್ರಕಾಶ್ ಪೂಜಾರಿ, ಮಹಮ್ಮದ್ ಇಕ್ಬಾಲ್, ಉಷಾ ಜೋಯಿ, ಚೇತನಾ, ಜಯಂತಿ ಮಾದೇರಿ, ಜಯಲಕ್ಷ್ಮಿಪ್ರಸಾದ್, ಪುಷ್ಪ ಪಡುಬೆಟ್ಟು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದರು. ಪಿಡಿಒ ಮೋಹನ್ ಕುಮಾರ್, ಲೆಕ್ಕ ಸಹಾಯಕ ಅಂಗು ಕಲಾಪ ನಡೆಸಿದರು. ಸಿಬ್ಬಂದಿಗಳು ಸಹಕರಿಸಿದರು.

Leave a Reply

error: Content is protected !!