ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತಟ್ಟು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜೋನ್ ಕೆ.ಪಿ.ಅವರು ಜು.31ರಂದು ಸೇವಾ ನಿವೃತ್ತಿಯಾಗಿದ್ದು ಈ ಸಂದರ್ಭದಲ್ಲಿ ಗೋಳಿತ್ತಟ್ಟು ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.
ಅತಿಥಿಯಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ನಿವೃತ್ತ ಸಹ ನಿರ್ದೇಶಕ ಬಸವೇ ಗೌಡ ಅವರು ಮಾತನಾಡಿ, ಸರಕಾರಿ ಸೇವೆಗೆ ಸೇರಿದವರಿಗೆ ನಿವೃತ್ತಿ ಕಡ್ಡಾಯವಾಗಿದೆ. ಜೋನ್ ಕೆ.ಪಿ.ಅವರು ಉಜಿರೆ ಹಳೆಪೇಟೆ ಸರಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ನಾನು ಬೆಳ್ತಂಗಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದೆ. ಜೋನ್ ಕೆ.ಪಿ.ಅವರು ಯಾವುದೇ ಫಲಾಪೇಕ್ಷೆ ಇಲ್ಲದೇ ತಾನು ಸೇವೆ ಸಲ್ಲಿಸಿದ ಶಾಲೆಗೆ ಬೇಕಾದ ಸವಲತ್ತು ಒದಗಿಸುತ್ತಿದ್ದರು. ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದ ಅವರು ಕಳಂಕರಹಿತ ವ್ಯಕ್ತಿಯಾಗಿದ್ದಾರೆ. ಧಾರ್ಮಿಕವಾಗಿಯೂ ಉತ್ತಮ ನಡವಳಿಕೆ ಹೊಂದಿದ್ದ ಅವರಲ್ಲಿ ಮಾನವೀಯ ವ್ಯಕ್ತಿತ್ವ ಅಡಗಿದೆ. ಅವರ ನಿವೃತ್ತಿ ಜೀವನವೂ ಸುಖಮಯವಾಗಿರಲಿ ಎಂದು ಹಾರೈಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ನಿವೃತ್ತ ಸಹ ನಿರ್ದೇಶಕ ವಾಲ್ಟರ್ ಡಿ.ಮೆಲ್ಲೋ ಅವರು ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಜೋನ್ ಕೆ.ಪಿ.ಅವರು ನಿವೃತ್ತಿಯ ವೇಳೆ ತನ್ನನ್ನು ಸನ್ಮಾನಿಸಿಕೊಳ್ಳುವ ಬದಲು ಸಮಾಜಕ್ಕೆ ಕೊಡುಗೆ ನೀಡಿದವರನ್ನು ಗೌರವಿಸಿ ಮಾದರಿಯಾಗಿದ್ದಾರೆ. ಅವರು ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿಗೆ ಮಾತ್ರ ಸೀಮಿತಗೊಳ್ಳದೆ ತಾನು ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿನ ಶಾಲೆಗಳಾದ ಹಳೆಪೇಟೆ, ಬಜತ್ತೂರು, ಗೋಳಿತ್ತೊಟ್ಟು ಹಾಗೂ ರಾಮಕುಂಜ ಶಾಲೆಗಳಿಗೆ ಬೇಕಾದ ಸವಲತ್ತು ಒದಗಿಸುವಲ್ಲಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ. ಬಜತ್ತೂರಿನಲ್ಲಿ ಸೇವಾದಳದ ನೇತೃತ್ವ ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅವರು ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತಿಯಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಅವರಿಂದ ಇನ್ನಷ್ಟೂ ಸೇವೆ ಸಿಗಲಿ ಎಂದು ಹಾರೈಸಿದರು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ 30 ವರ್ಷ ಸೇವೆ ಸಲ್ಲಿಸಿರುವ ಜೋನ್ ಕೆ.ಪಿ.ಅವರಿಗೆ ಇಲಾಖೆಯ ಪರವಾಗಿ ಧನ್ಯವಾದಗಳು. ಶಿಕ್ಷಕನಿಗೆ ನಿವೃತ್ತಿಯ ವೇಳೆ ಸಿಗುವ ಗೌರವ ನಿಜವಾಗಿಯೂ ಶ್ರೇಷ್ಠವಾದದ್ದು. ಈ ಗೌರವಕ್ಕೆ ಜೋನ್ ಕೆ.ಪಿ.ಅವರು ಪಾತ್ರರಾಗಿದ್ದಾರೆ. ಅವರಿಗೆ ಹಾಗೂ ಅವರ ಕುಟುಂಬದವರಿಗೆ ದೇವರು ಆಯುರಾರೋಗ್ಯ ಕರುಣಿಸಲಿ. ಜೋನ್ ಅವರ ನಿವೃತ್ತಿ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.
ಗೋಳಿತ್ತಟ್ಟು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಗೋಪಾಲ ಗೌಡ ಕುದ್ಕೋಳಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಮೋಹನ ಉಪಾಧ್ಯಾಯ, ರಾಮಕುಂಜ ಕ್ಲಸ್ಟರ್ ಸಿ ಆರ್ ಪಿ ಮಹೇಶ್, ಜೋನ್ ಕೆ.ಪಿ.ಅವರ ಅಣ್ಣ ಕೆ.ಪಿ.ತೋಮಸ್ ನೆಲ್ಯಾಡಿ ಸಂದರ್ಭೋಚಿತವಾಗಿ ಮಾತನಾಡಿದರು.
ಶಾಲಾ ಮುಖ್ಯಶಿಕ್ಷಕ ಜಯಂತಿ ಬಿ.ಎಂ.ಸ್ವಾಗತಿಸಿದರು. ಕೆಯ್ಯೂರು ಕೆಪಿಎಸ್ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಆರಂಭಕ್ಕೂ ಮೊದಲು ಶಾಲಾ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಕೆ.ಪಿ.ತೋಮಸ್ ಅವರು ಮಾಲಾರ್ಪಣೆ ಮಾಡಿದರು. ಅತಿಥಿಗಳು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಬಳಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಮಧ್ಯಾಹ್ನ ಸಿಹಿ ಭೋಜನ ನೀಡಲಾಯಿತು.
ಸನ್ಮಾನ:
ಸಿಆರ್‍ಪಿಎಫ್ ಡೆಪ್ಯುಟಿ ಕಮಾಂಡೆಂಟ್ ಆಗಿ ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿರುವ ಅನ್ನಮ್ಮ ಯೇಸುದಾಸ್, ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ ಗೌರಿಜಾಲು, ಸಮಾಜ ಸೇವಕ ಜೋಸ್ ಕೆ.ಜೆ., ರಾಷ್ಟ್ರಮಟ್ಟದ ಕ್ರೀಡಾಪಟು ಚರಿಷ್ಮಾ ಕಡಬ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೇನೇಜರ್ ಮಹೇಶ್ ಎಂ.ಟಿ., ಚಿತ್ರಕಲಾವಿದ ಮನೋಜ್ ಕನಪಾಡಿ, ನಿವೃತ್ತ ಗ್ರಾಮ ಸಹಾಯಕ ಜಿ.ಮಾಯಿಲಪ್ಪ ಗೌಡ ಅವರನ್ನು ಪೇಟ, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ನೀಡಿ ಜೋನ್ ಕೆ.ಪಿ.ಅವರ ಪರವಾಗಿ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ಕಾರ್ಕಳ ಇರ್ವತ್ತೂರು ಸರಕಾರಿ ಶಾಲಾ ಶಿಕ್ಷಕ ಅರುಣ್ ಶೇಟ್, ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ.ಕೆ., ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಚಂದ್ರ ಜಿ., ಗೋಳಿತ್ತಟ್ಟು ಶಾಲಾ ನಾಯಕಿ ಶರಣ್ಯ, ಕಲ್ಲುಗುಡ್ಡೆ ಸರಕಾರಿ ಉ.ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬೇಬಿ, ಏಕತ್ತಡ್ಕ ಶಾಲಾ ಮುಖ್ಯಶಿಕ್ಷಕಿ ಚಿತ್ರಾ ರೈ ಹಾಗೂ ಗೋಳಿತ್ತಟ್ಟು ಶಾಲಾ ಗೌರವ ಶಿಕ್ಷಕಿ ಯಶಸ್ವಿನಿ ಅವರು ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಿತರಾದ ಜೋಸ್ ಕೆ.ಜೆ., ಮನೋಜ್ ಕನಪಾಡಿ, ಮಹೇಶ್ ಎಂ.ಟಿ.ಅವರು ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿ ಮಾತನಾಡಿದರು.
ಗೌರವಾರ್ಪಣೆ:
ಗೋಳಿತ್ತಟ್ಟು ಶಾಲೆಗೆ ಶೌಚಾಲಯ, ಪೈಂಟ್ ಹಾಗೂ ಇನ್ನಿತರ ಕೆಲಸಗಳಿಗೆ ಅನುದಾನ ಒದಗಿಸಿಕೊಟ್ಟ ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ರಾಮಕುಂಜ ಶಾಲೆಗೆ ಶೌಚಾಲಯ ನಿರ್ಮಾಣಕ್ಕೆ 4 ಲಕ್ಷ ರೂ., ರಂಗಮಂದಿರ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಟ್ಟ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಗೋಳಿತ್ತಟ್ಟು ಶಾಲೆಗೆ ಉದ್ಯೋಗಖಾತ್ರಿ ಯೋಜನೆಯಡಿ ಆವರಣ ಗೋಡೆ ನಿರ್ಮಾಣಕ್ಕೆ ಸಹಕಾರ ನೀಡಿದ ಗೋಳಿತ್ತೊಟ್ಟು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ಗೋಳಿತ್ತಟ್ಟು ಶಾಲೆಗೆ ಕೊಡುಗೆ ನೀಡಿದ ಲಯನ್ಸ್ ಕ್ಲಬ್‍ನ ಪೂರ್ವಾಧ್ಯಕ್ಷ ಜೋಸ್ ಮ್ಯಾಥ್ಯು, ಭಾರತ ಸೇವಾದಳದ ಕೃಷ್ಣರಾವ್ ಅವರಿಗೆ ಶಾಲು ಹಾಕಿ, ಹೂ ನೀಡಿ ಗೌರವಾರ್ಪಣೆ ಮಾಡಲಾಯಿತು. ಮನವಿ ಮೇರೆಗೆ ಶಾಲೆಗೆ ಅನುದಾನ ಒದಗಿಸಿಕೊಟ್ಟಿರುವುದಕ್ಕೆ ಜೋನ್ ಕೆ.ಪಿ.ಅವರು ಕೃತಜ್ಞತೆ ಸಲ್ಲಿಸಿದರು.
ಕೆ.ಪಿ. ಜೋನ್ ದಂಪತಿಗೆ ಸನ್ಮಾನ:
ನಿವೃತ್ತರಾಗುತ್ತಿರುವ ಜೋನ್ ಕೆ.ಪಿ.ಹಾಗೂ ಅವರ ಪತ್ನಿ ರೂಬಿ ಜೋನ್ ಅವರಿಗೆ ಪುತ್ತೂರು, ಕಡಬ ತಾಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಜೋನ್ ಕೆ.ಪಿ.ಅವರೊಂದಿಗೆ ಸೇವೆ ಸಲ್ಲಿಸಿದ ಮುಖ್ಯಶಿಕ್ಷಕರು, ಸಹಶಿಕ್ಷಕರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯವರು, ಗೋಳಿತ್ತಟ್ಟು ಶಾಲಾ ಎಸ್‍ಡಿಎಂಸಿ ಅಧ್ಯಕ್ಷರು, ಮುಖ್ಯಶಿಕ್ಷಕರು ಸೇರಿದಂತೆ ಹಲವು ಮಂದಿ ಹಾರಾರ್ಪಣೆ, ಪೇಟ, ಶಾಲು ಹಾಕಿ ಗೌರವಿಸಿದರು.