ಕಡಬ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ 78ನೇಸ್ವಾತಂತ್ರ್ಯ ದಿನಾಚರಣೆಯನ್ನು ವಿದ್ಯುಕ್ತವಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಯೋಧರಾದ ಶ್ರೀ ಅನಿಶ್ ಡಿ ಎಲ್ ಅವರು ಧ್ವಜಾರೋಹಣಗೈದರು. ಜಾತಿ ಮತ ಧರ್ಮ ಭೇದಗಳ ನೆಲೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಲು ಅವಕಾಶ ನೀಡದೆ ,ಸಂವಿಧಾನದ ಶ್ರೇಷ್ಠ ಅಂಶಗಳನ್ನು ಭಾರತೀಯರೆಲ್ಲರೂ ಅನುಸರಿಸಬೇಕು; ಅಲ್ಲದೆ ರಾಷ್ಟ್ರೀಯ ಸಮಗ್ರತೆಗೆ ಐಕ್ಯತಾಭಾವನೆ ನಮ್ಮ ಮೂಲ ಮಂತ್ರವಾಗಬೇಕು ಎಂದು ಅವರು ಅತಿಥಿ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂ. ಪ್ರಕಾಶ್ ಪಾವ್ಲ್ ಡಿ’ಸೋಜ ವಹಿಸಿಕೊಂಡಿದ್ದರು. ಅವರು ಅಧ್ಯಕ್ಷ ಭಾಷಣದಲ್ಲಿ” ಯುವ ಮನಸ್ಸುಗಳು ಬಲಿಷ್ಠ ಭಾರತದ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು, ಇಂದಿನ ಯುವ ಪೀಳಿಗೆಯಲ್ಲಿ ರಾಷ್ಟ್ರೀಯತೆಯ ಮನೋಭಾವ ಬೆಳೆಯಲು ಪ್ರೇರಕವಾದ ರಚನಾತ್ಮಕ ಚಟುವಟಿಕೆಗಳು ರೂಪಗೊಳ್ಳಬೇಕೆಂದು” ಹೇಳಿದರು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸೈಂಟ್ ಜೋಕಿಮ್ಸ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನ್ನಿಸ್ ಫೆರ್ನಾಂಡಿಸ್, ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ವೇಗಸ್, ವಿದ್ಯಾ ಸಂಸ್ಥೆಗಳ ರಕ್ಷಕ- ಶಿಕ್ಷಕ ಸಮಿತಿಯ ಉಪಾಧ್ಯಕ್ಷರುಗಳಾದ ಗಿರಿಧರ್ ರೈ, ಈಶ್ವರ್ ಕೆ, ವಿದ್ಯಾಸಂಸ್ಥೆಗಳ ಮುಖ್ಯಸ್ಥರುಗಳಾದ ವಂ.ಅಮಿತ್ ಪ್ರಕಾಶ್ ರೋಡ್ರಿಗಸ್ , ಶ್ರೀ ಕಿರಣ್ ಕುಮಾರ್ ,ಶ್ರೀಮತಿ ಶ್ರೀಲತಾ, ಸಿಸ್ಟರ್ ಹಿಲ್ಡಾ ರೋಡ್ರಿಗಸ್ ಹಾಗೂ ಶ್ರೀಮತಿ ದಕ್ಷಾ ಪ್ರಸಾದ್ ಉಪಸ್ಥಿತರಿದ್ದರು.
ಧ್ವಜಾರೋಹಣ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ದೇಶಪ್ರೇಮವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಸೈಂಟ್ ಜೋಕಿಮ್ಸ್ ಕಾಲೇಜು ವಿದ್ಯಾರ್ಥಿನಿ ಸಾನಿಕ ಸ್ವಾಗತಿಸಿ, ಸೈಂಟ್ ಆನ್ಸ್ ಶಾಲಾ ಶಿಕ್ಷಕಿ ಶ್ರೀಮತಿ ದಿವ್ಯಜ್ಯೋತಿ ವಂದಿಸಿದರು.ಸೈಂಟ್ ಜೋಕಿಮ್ಸ್ ಶಾಲಾ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.