ಫುಟ್ ಬಾಲ್ ಪಂದ್ಯಾದ ವೇಳೆ ಎರಡು ಕಾಲೇಜು ವಿದ್ಯಾರ್ಥಿಗಳ ನಡುವೆ ಕಿರಿಕ್ ಉಂಟಾಗಿ, ತಂಡವೊಂದು ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆಗೈದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ನೆಹರೂ ಮೈದಾನದಲ್ಲಿ ಆ.14ರಂದು ಎರಡು ಪ್ರತಿಷ್ಠಿತ ಕಾಲೇಜಿನ ನಡುವೆ ಫುಟ್ ಬಾಲ್ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ಕೆಲ ವಿದ್ಯಾರ್ಥಿಗಳು ಎದುರಾಳಿ ತಂಡವನ್ನು ಬೆಂಬಲಿಸಿದ ಕಾರಣದಿಂದಾಗಿ ಎರಡು ತಂಡಗಳ ನಡುವೆ ಜಗಳ ಉಂಟಾಗಿತ್ತು.
ಇದೇ ವಿಚಾರವನ್ನಿಟ್ಟುಕೊಂಡು ಸೋಮವಾರ(ಆ.19ರಂದು) ಸಂಜೆ 6:15ರ ಹೊತ್ತಿಗೆ ಪಾಂಡೇಶ್ವರ ಫೋರಂ ಮಾಲ್ ಬಳಿ ಖಾಸಗಿ ಕಾಲೇಜಿನ 17 ವರ್ಷದ ಅಪ್ರಾಪ್ತ ಹುಡುಗನ ಮೇಲೆ ದಿಯಾನ್, ತಸ್ಲಿಮ್, ಸಲ್ಮಾನ್ ಮತ್ತು ಇತರ ಇಬ್ಬರು 17 ವರ್ಷದ ಅಪ್ರಾಪ್ತ ಹುಡುಗರು ಹಲ್ಲೆ ಮಾಡಿದ್ದರು.
17 ವರ್ಷದ ಅಪ್ರಾಪ್ತ ಹುಡುಗ ಹಾಗೂ ಆತನ ಸ್ನೇಹಿತರನ್ನು ಅಪಹರಿಸಿ ಕಾರಿನಲ್ಲಿ ಹಾಕಿಕೊಂಡು ಕೈ ಕಾಲಿನಿಂದ ಹಲ್ಲೆಗೈದಿದ್ದಾರೆ. ಮಹಾಕಾಳಿ ಪಡ್ಪು, ಕಣ್ಣೂರು ಮಸೀದಿ ಬಳಿ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ದು ಮತ್ತಷ್ಟು ಹಲ್ಲೆ ನಡೆಸಿದ್ದಾರೆ.
ಅರೆನಗ್ನಗೊಳಿಸಿ, ಸಿಗರೇಟ್ ನಿಂದ ಸುಟ್ಟು ಹಲ್ಲೆ ನಡೆಸಿದ್ದು, ಕೃತ್ಯದ ವಿಡಿಯೋವನ್ನು ವ್ಯಾಟ್ಸಾಪ್ ನಲ್ಲಿ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳು ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ದಿಯಾನ್ ಮತ್ತು ಸಲ್ಮಾನ್ ಎನ್ನುವ ಇಬ್ಬರನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.