ಕೊಕ್ಕಡ: ಪುದುವೆಟ್ಟು ಗ್ರಾಮದ ಮಡ್ಯದಿಂದ ಹೊಳೆಯವರೆಗಿನ ಪಂಚಾಯತ್ ರಸ್ತೆಯ ಅತಿಕ್ರಮಣವಾಗಿದ್ದು ಪೊಲೀಸ್ ರಕ್ಷಣೆಯೊಂದಿಗೆ ಸೆ.2ರಂದು ಗ್ರಾಮ ಪಂಚಾಯತ್ ತೆರವುಗೊಳಿಸಿದೆ.
ಶ್ರೀಪತಿ ಹೆಬ್ಬಾರ್ ಎಂಬವರು ರಸ್ತೆಯನ್ನು ಅತಿಕ್ರಮಣ ಮಾಡಿ, ಬಂದ್ ಮಾಡಿರುವ ಕುರಿತು ಕಳೆದ ಗ್ರಾಮಸಭೆಯಲ್ಲಿ ಚರ್ಚೆಯಾಗಿತ್ತು. ರಸ್ತೆ ಬಂದ್ ಮಾಡಿದ ಪರಿಣಾಮ ವಿದ್ಯುತ್ ಟ್ರಾನ್ಸ್‌ಫಾರ್ಮರ್ ದುರಸ್ತಿ, ನೀರಿನ ಟ್ಯಾಂಕ್ ಸಂಪರ್ಕಕ್ಕೆ ಕಷ್ಟವಾಗಿರುವ ಕುರಿತು ಸ್ಥಳೀಯರು ದೂರು ನೀಡಿದ್ದರು. ಗ್ರಾಮಸಭೆಯ ಬಳಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಅತಿಕ್ರಮಣವನ್ನು ತೆರವುಗೊಳಿಸಲು ನಿರ್ಣಯ ಕೈಗೊಳ್ಳಲಾಗಿತ್ತು.
ಅದರಂತೆ ಸೆ.2ರಂದು ಜೆಸಿಬಿ ಯಂತ್ರದ ಮೂಲಕ ಭಾರಿ ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. ಮಡ್ಯದಿಂದ ಹೊಳೆಯವರೆಗೆ ಸಾಗುವ ರಸ್ತೆಯ ಮಧ್ಯೆ ಒಂದು ಟೈರು ಕಳಚಿದ ಸ್ಥಿತಿಯಲ್ಲಿ ಜೀಪನ್ನು ನಿಲ್ಲಿಸಲಾಗಿತ್ತು. ಟೈರು ಪಂಕ್ಚರ್ ಆಗಿದೆ ಎಂದು ಕೆಲಸದವರು ತಿಳಿಸಿದರು. ಉದ್ದೇಶಪೂರ್ವಕವಾಗಿಯೇ ರಸ್ತೆಯ ಮಧ್ಯೆ ಜೀಪನ್ನು ನಿಲ್ಲಿಸಲಾಗಿದೆ ಎಂದು ಸ್ಥಳೀಯರು ದೂರಿದರು. ವಾಗ್ವಾದ ನಡೆದು, ಕೊನೆಗೆ ರಸ್ತೆಯ ಬದಿಯಿಂದ ಪೊದೆಗಳನ್ನು ಸರಿಸಿ ಮುಂದೆ ಸಾಗಿದ ಜೆಸಿಬಿ, ರಸ್ತೆಯಲ್ಲಿ ಹಾಕಲಾಗಿದ್ದ ಕಲ್ಲುಗಳನ್ನು ತೆರವುಗೊಳಿಸಲಾಯಿತು. ತೋಡಿಗೆ ಅಕ್ರಮವಾಗಿ ಹಾಕಲಾಗಿದ್ದ ಮೋರಿಯನ್ನೂ ತೆರವುಗೊಳಿಸಿ, ಸ್ಥಳೀಯರಿಗೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಪೂರ್ಣಾಕ್ಷ, ನಿಕಟ ಪೂರ್ವ ಅಧ್ಯಕ್ಷ ಯಶವಂತ ಗೌಡ, ಮಾಜಿ ಅಧ್ಯಕ್ಷ ಅಬ್ದುಲ್ ಗಫೂರ್, ಸದಸ್ಯರಾದ ಭಾಸ್ಕರ, ರಾಮೇಂದ್ರ, ವನಿತಾ, ಇಂದಿರಾ, ರೇಣುಕಾ, ಅಪ್ಪಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಬಸಪ್ಪ ಗೌಡ್ರ, ಮಾಜಿ ಸದಸ್ಯ ರೋಹಿ, ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕಿಶೋರ್, ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ರವಿಚಂದ್ರನ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.