ನೆಲ್ಯಾಡಿ:ವಿಪರೀತ ಅಮಲುಪದಾರ್ಥ ಸೇವಿಸುತ್ತಿದ್ದ ಪರಿಣಾಮ ಮಾನಸಿಕ ಸ್ಥಿಮಿತ ಕಳೆದುಕೊಂಡು ಸಿರಿಬಾಗಿಲು ಗ್ರಾಮದ ಪುಲ್ಲೊಟ್ಟೆ ನಿವಾಸಿ ಸ್ವರ್ಣಪ್ಪನ್ ಎಂಬವರ ಪುತ್ರ ಲೋಹಿತ್ಕುಮಾರ್ (47ವ.) ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸೆ.19ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಲೋಹಿತ್ ಕುಮಾರ್ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದು ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದರು. ಇದೇ ಕಾರಣಕ್ಕೆ ಗಂಡನೊಂದಿಗೆ ಸರಿ ಬಾರದೇ ಕೆಲ ದಿನದ ಹಿಂದೆ ಪತ್ನಿ ಮಕ್ಕಳೊಂದಿಗೆ ಆಕೆಯ ತಾಯಿ ಮನೆಗೆ ಹೋಗಿದ್ದರು. ಬಳಿಕವು ಲೋಹಿತ್ ಮದ್ಯ ಸೇವಿಸಿಕೊಂಡಿದ್ದು ಸೆ.18ರಂದು ಸಂಜೆ ಗುಂಡ್ಯಕ್ಕೆ ಹೋಗಿ ರಾತ್ರಿ 8 ಗಂಟೆಗೆ ಮನೆಗೆ ಬಂದಿದ್ದರು. ಬಳಿಕ ಮೊಬೈಲ್ ವಾಟ್ಸಫ್ ಸ್ಟೇಟಸ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಮೆಸೇಜ್ ಹಾಕಿದ್ದರು. ಇದನ್ನು ಮಂಗಳೂರಿನಲ್ಲಿರುವ ಲೋಹಿತ್ ಕುಮಾರ್ ಅವರ ಅಣ್ಣನ ಮಗಳು ಬೆಳಿಗ್ಗೆ ನೋಡಿ ಸ್ವರ್ಣಪ್ಪನ್ ಅವರಿಗೆ ಮಾಹಿತಿ ನೀಡಿದ್ದರು. ಅವರು ಬೆಳಿಗ್ಗೆ 8.30ಕ್ಕೆ ಲೋಹಿತ್ ವಾಸವಾಗಿದ್ದ ಮನೆಗೆ ಹೋಗಿ ನೋಡಿದಾಗ ಲೋಹಿತ್ ಮನೆಯ ಹಾಲ್ನಲ್ಲಿ ಮರದ ಅಡ್ಡಕ್ಕೆ ಸೀರೆಯನ್ನು ಕಟ್ಟಿ ನೇಣು ಬಿಗಿದು ನೇತಾಡಿಕೊಂಡಿರುವುದನ್ನು ನೋಡಿ ಬೊಬ್ಬೆ ಹಾಕಿದ್ದು ಪಕ್ಕದವರು ಬಂದು ಪರಿಶೀಲಿಸಿದಾಗ ಲೋಹಿತ್ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಲೋಹಿತ್ಕುಮಾರ್ ವಿಪರೀತ ಅಮಲು ಪದಾರ್ಥ ಸೇವಿಸುತ್ತಿದ್ದ ಪರಿಣಾಮ ಮಾನಸಿಕ ಸ್ಥಿಮಿತ ಕಳೆದುಕೊಂಡು ಸಂಸಾರದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ವರ್ಣಪ್ಪನ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.