ನೆಲ್ಯಾಡಿಯ ವಿವಿ ಘಟಕ ಕಾಲೇಜು ಇಲ್ಲಿನ 2024-25ನೇ ಶೈಕ್ಷಣಿಕ ಸಾಲಿನ ಎನ್ ಎಸ್ ಎಸ್ ಘಟಕದ ಮತ್ತು ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಸಂಯೋಜಕಡಾ.ಸುರೇಶ್ ಅವರ ಸಲಹೆ, ನಿರ್ದೇಶನದೊಂದಿಗೆ ನೆರವೇರಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಹಾಗೂ ಉದ್ಘಾಟಕರಾಗಿ ಪುತ್ತೂರಿನ ವಿವೇಕಾನಂದ ಕಾಲೇಜಿನ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಉಪನ್ಯಾಸಕಿ ಜ್ಯೋತಿ ಯಡಪಡಿತ್ತಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಪ್ರಜ್ಞೆಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ನಮ್ಮ ಬದುಕಿನೊಂದಿಗೆ ದೇಶದ ಅಭಿವೃದ್ಧಿಗೆ ಶ್ರಮಿಸಲು ಸಾಧ್ಯವಾಗುತ್ತದೆ. ಸಮಯಪಾಲನೆ, ಶಿಸ್ತು, ಶ್ರದ್ಧೆ, ಬದ್ಧತೆ ಮತ್ತು ಪರಿಶ್ರಮದ ಮೂಲಕ ಬರುವ ಪ್ರತಿಫಲವು ಮೌಲ್ಯಯುತವಾಗಿರುತ್ತದೆ. ಇಂತಹ ಮೌಲ್ಯಯುತ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಎನ್ ಎಸ್ ಎಸ್ ಚಟುವಟಿಕೆಗಳು ಪ್ರೇರಕ ಶಕ್ತಿಯಾಗುತ್ತವೆ ಎಂದರು.
ಯುವ ರೆಡ್ ಕ್ರಾಸ್ ಘಟಕದ ಕಾರ್ಯ ಚಟುವಟಿಕೆಗಳ ಕುರಿತು ಕಾರ್ಯಕ್ರಮ ಅಧಿಕಾರಿ ಡಾ.ನೂರಂದಪ್ಪ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸೀತಾರಾಮ ಪಿ. ಅವರು ಮಾತನಾಡುತ್ತಾ ಸಾಮಾಜಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಷ್ಟಿ ಪ್ರಜ್ಞೆಯ ಭಾಗವಾಗಲು ಎನ್ ಎಸ್ ಎಸ್ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳಲ್ಲಿ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿ ಎಂದು ಶುಭ ಹಾರೈಸಿದರು.
ಎನ್ ಎಸ್ ಎಸ್ ಯೋಜನಾಧಿಕಾರಿ ಶ್ರುತಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂ ಸೇವಕ ಅಮೀರ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ನಾಯಕಿ ವರ್ಷಿಣಿ ವಂದಿಸಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕ ಪ್ರಣಿತ್ ಹಾಗೂ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.