ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

ಶೇರ್ ಮಾಡಿ

ಅಲಂಕಾರಿನ ಶ್ರೀಭಾರತಿ ವಿದ್ಯಾಸಂಸ್ಥೆಗಳಲ್ಲಿ ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯು ನಡೆಯಿತು.

ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ಮಾಡಿದ ಶ್ರೀಕ್ಷೇತ್ರ ಶರವೂರಿನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ರಾವ್ ಇವರು ಮಾತನಾಡುತ್ತಾ “ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿವಸಗಳಲ್ಲಿ ಯುವ ಜನರಲ್ಲಿ ಸೇವಾ ಮನೋಭಾವದಂತಹ ವಿವಿಧ ಮೌಲ್ಯಗಳು ಕಡಿಮೆಯಾಗುತ್ತಿದ್ದು ಅನಗತ್ಯ ವಿಷಯಗಳಿಗೆ ಅವರು ಆಕರ್ಷಿತರಾಗುತ್ತಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಈ ವಿಶೇಷ ಶಿಬಿರದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳು ಮೌಲ್ಯಗಳನ್ನ ಅರಿತುಕೊಂಡು ಉತ್ತಮ ನಾಗರಿಕರಾಗಿ ಮೂಡಿಬರುವಂತಾಗಲಿ” ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಭಾರತಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಸುರೇಶ್ ಕುಮಾರ್ ಕೂಡೂರು ಇವರು ಮಾತನಾಡುತ್ತಾ, “ರಾಷ್ಟ್ರೀಯ ಸೇವಾ ಯೋಜನೆಯು ನನಗಲ್ಲ ನಿಮಗೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಮಾಜದ ಸೇವೆಯನ್ನು ಮಾಡುವಂತ ಉದ್ದೇಶವನ್ನು ಹೊಂದಿದೆ. ಯಾಕೆ ಈ ಸೇವೆಯನ್ನು ಮಾಡಬೇಕು ಎಂದರೆ, ಹುಟ್ಟಿದಾಗಿನಿಂದ ನಮಗೆ ಬೇರೆ ಬೇರೆ ತರಹದ ಋಣ ಇರುತ್ತದೆ. ನಾವು ಸದಾ ಈ ಋಣವನ್ನ ತೀರಿಸುವಂತಹದರ ಕಡೆಗೆ ಆಲೋಚನೆಯನ್ನು ಮಾಡಬೇಕು, ಅದಕ್ಕಾಗಿ ಸರ್ವ ರೀತಿಯ ಸಮರ್ಪಣೆಯ ಅಗತ್ಯತೆಯು ಖಂಡಿತವಾಗಿಯೂ ಇದೆ. ಒಂದು ಶಾಲೆ, ಸಂಘಟನೆ ಪರಿವರ್ತನೆಯ ಕೇಂದ್ರವಾಗಬೇಕು. ಇಂತಹ ಪರಿವರ್ತನೆಯನ್ನು ರಾಷ್ಟ್ರೀಯ ಸೇವಾ ಯೋಜನೆಯು ಖಂಡಿತವಾಗಿಯೂ ಮಾಡುತ್ತದೆ. ಭಾರತೀ ಶಾಲೆಯಲ್ಲಿ ನಡೆಯುತ್ತಿರುವ ಈ ವಿಶೇಷ ಶಿಬಿರವು ಸ್ವಯಂ ಮತ್ತು ಸಮಾಜ ಪರಿವರ್ತನೆಯನ್ನು ಮಾಡುವಂತಾಗಲಿ” ಎಂದು ಹಿತನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅತಿಥಿಗಳಾದ ಅಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ್ ರಾವ್, ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರು ಇದರ ಗೌರವಾಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಶ್ರೀಕ್ಷೇತ್ರ ಶರವೂರಿನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೇಮಂತ್ ರೈ ಮನವಳಿಕೆ, ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಬಿರ ನಿರ್ದೇಶಕ ಚಂದ್ರಶೇಖರ್.ಕೆ, ಎನ್ಎಸ್ಎಸ್ ಅನುಷ್ಠಾನ ಸಮಿತಿಯ ಅಧ್ಯಕ್ಷ ಇಂದುಶೇಖರ ಶೆಟ್ಟಿ, ಶ್ರೀಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ಕುಮಾರ್.ಜಿ.ಆರ್, ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್.ಕೆ ಎಂ.ಬಿ, ಎನ್ಎಸ್ಎಸ್ ಅನುಷ್ಠಾನ ಸಮಿತಿಯ ಸದಸ್ಯ ಗಣೇಶ್ ಹಿರಿಂಜ, ಶಿವರಾಧಿಕಾರಿ ಕೀರ್ತನ್, ಘಟಕದ ನಾಯಕಅಶ್ವಥ್, ನಾಯಕಿ ಮಾನ್ಯ ಉಪಸ್ಥಿತರಿದ್ದರು.

ಶಿಬಿರದ ನಿರ್ದೇಶಕರು, ಕಾಲೇಜಿನ ಪ್ರಾಂಶುಪಾಲಚಂದ್ರಶೇಖರ್.ಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಎನ್ಎಸ್ಎಸ್ ಈ ವರ್ಷದ ಘೋಷವಾಕ್ಯ’ ಜೀವ ವಿರೋಧಿ ಹೆಣ್ಣು ಭ್ರೂಣ ಹತ್ಯೆಯನ್ನು ನಿಲ್ಲಿಸುವುದು ಮತ್ತು ಲಿಂಗ ಸಮಾನತೆಯನ್ನು ಸಾಧಿಸುವುದು.’ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗೃತರಾಗಿ ಉತ್ತಮ ಸಮಾಜವನ್ನು ನಿರ್ಮಿಸುವಂತವರಾಗಬೇಕು” ಎಂದು ಹೇಳಿದರು.

ಸಹಶಿಬಿರಾಧಿಕಾರಿ ಚೈತ್ರ ವಂದಿಸಿದರು. ಉಪನ್ಯಾಸಕ ಚೇತನ್.ಎಂ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಗ್ರೀಷ್ಮ ಮತ್ತು ಬಳಗ ಪ್ರಾರ್ಥನೆ ನೆರವೇರಿಸಿದರು. ಸಹಶಿಬಿರಾಧಿಕಾರಿ ತಿಲಕಾಕ್ಷ ಮತ್ತು ಸುಜಾತ ಸಹಕರಿಸಿದರು.

Leave a Reply

error: Content is protected !!