ಕೆಲಸದಲ್ಲಿ ತೃಪ್ತಿ, ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಅಗತ್ಯ: ಕುಮಾರಸ್ವಾಮಿ.ಟಿ
ಉಜಿರೆ: ಮಾಡುವ ಕೆಲಸದಲ್ಲಿ ತೃಪ್ತಿ, ಆ ಕೆಲಸದ ಕುರಿತು ಆಳವಾದ ಅರಿವು ಹಾಗೂ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಇರುವುದು ಅಗತ್ಯ ಎಂದು ಹಿರಿಯ ಸಾಹಿತಿ, ನಿವೃತ್ತ ಇಂಜಿನಿಯರ್ ಕುಮಾರಸ್ವಾಮಿ ಟಿ. ಹೇಳಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಸರಣಿ ‘ಎಸ್ ಡಿ ಎಂ ನೆನಪಿನಂಗಳ’ದ ಹದಿನಾರನೇ ಕಂತಿನ ಕಾರ್ಯಕ್ರಮದಲ್ಲಿ ಅವರು ಪ್ರತಿಭಾನ್ವಿತ ವಿದ್ಯಾರ್ಥಿ ನಿತಿನ್ ಎಸ್.ಜೆ. (ದ್ವಿತೀಯ ಬಿ.ಎ.) ಅವರಿಗೆ 5,000 ರೂ. ಸಹಾಯಧನ ಹಸ್ತಾಂತರಿಸಿ ಮಾತನಾಡಿದರು.
“ತೃಪ್ತಿ ಇದ್ದಲ್ಲಿ ನಾವು ಭ್ರಷ್ಟಾಚಾರಕ್ಕೆ ಒಳಗಾಗದೆ ಬದುಕಬಹುದು. ಏನನ್ನಾದಾರೂ ಸಾಧಿಸಬೇಕಾದರೆ ಮೊದಲು ಅಹಂಕಾರ ಬಿಡಬೇಕು. ಹಾಗಿದ್ದಾಗ ಸಾಧಿಸುವ ಅವಕಾಶಗಳು ಹೇರಳವಾಗಿ ದೊರೆಯುತ್ತವೆ. ಶಿಸ್ತು ಇತ್ಯಾದಿ ಮೌಲ್ಯಗಳಿದ್ದಾಗ ಯಶಸ್ಸು ಸಾಧ್ಯವಾಗುತ್ತದೆ” ಎಂದು ಅವರು ಕಿವಿಮಾತು ಹೇಳಿದರು.
ಸಿದ್ಧವನ ಗುರುಕುಲದಲ್ಲಿ ತಾವು ಕಳೆದ ದಿನಗಳನ್ನು ಮೆಲುಕು ಹಾಕಿದ ಅವರು, “ಸಾಮರಸ್ಯ, ಸಹಬಾಳ್ವೆಯಂತಹ ಮೌಲ್ಯಗಳನ್ನು ಸಿದ್ಧವನ ಕಲಿಸಿದೆ, ಉತ್ತಮ ಗೆಳೆಯರನ್ನು ನೀಡಿದೆ” ಎಂದರು.
ಜೀವನ ಕೇವಲ 60 ವರ್ಷಗಳವರೆಗೆ ಅಲ್ಲ. ಅದರ ಮೇಲೂ ಇದೆ. ಯೋಗಾಭ್ಯಾಸ, ಓದು ಇತ್ಯಾದಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ವಿಶ್ರಾಂತ ಜೀವನದಲ್ಲಿ ಅವು ನೆರವಾಗುತ್ತವೆ ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಎಸ್.ಎನ್. ಕಾಕತ್ಕರ್, “ಯಾವುದೇ ಶಿಕ್ಷಣ ಸಂಸ್ಥೆ ಬೆಳೆಯಬೇಕಾದರೆ ಉತ್ತಮ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಅಗತ್ಯ. ನಮ್ಮ ಕಾಲೇಜಿನಲ್ಲಿ ಈ ಎಲ್ಲ ಅಂಶಗಳೂ ಸಾಂಸ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಹಳೆ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ವಿತರಣೆ, ಬಿಸಿಯೂಟ ಯೋಜನೆಗೆ ಆರ್ಥಿಕ ನೆರವು ಇತ್ಯಾದಿ ಕಾರ್ಯಗಳನ್ನು ಮಾಡುತ್ತಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ಅತಿಥಿಯನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಡಾ.ಎಂ.ಪಿ.ಶ್ರೀನಾಥ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ಗುರುರಾಜ್ ಭಟ್ ವಂದಿಸಿದರು.