ಕೊಕ್ಕಡ: ಸಂಪನ್ನಗೊಂಡ ಉಚಿತ ಟೈಲರಿಂಗ್ ತರಬೇತಿ ಶಿಬಿರ

ಶೇರ್ ಮಾಡಿ

ಕೊಕ್ಕಡ: ಕನ್ಯಾಡಿ ಸೇವಾಭಾರತಿ (ರಿ), ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶ್ರೀ ರಾಮ ಸೇವಾ ಟ್ರಸ್ಟ್ (ರಿ.), ಕೊಕ್ಕಡ ಶ್ರೀ ದುರ್ಗಾ ಮಾತೃ ಮಂಡಳಿ ಕನ್ಯಾಡಿ ಇವುಗಳ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 28ನೇ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಅ.17ರಂದು ಶ್ರೀರಾಮ ಸೇವಾ ಮಂದಿರ ಕೊಕ್ಕಡದಲ್ಲಿ ನಡೆಯಿತು.

ಕೊಕ್ಕಡ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್(ರಿ.) ಅಧ್ಯಕ್ಷ ಕೆ.ಕೃಷ್ಣ ಭಟ್ ಅವರು ಕೊಕ್ಕಡದ ಗ್ರಾಮೀಣ ಜನರಿಗೆ ಸ್ವಉದ್ಯೋಗ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟರುವುದು ಬಹಳ ಸಂತೋಷದ ವಿಷಯ ಹಾಗೂ ಸೇವಾಭಾರತಿ ಸಂಸ್ಥೆಯು ನಡೆಸುವ ಸೇವೆಗಳ ಬಗ್ಗೆ ಶ್ಲಾಘಿಸಿ ಇನ್ನಷ್ಟು ಸೇವೆಯನ್ನು ಮಾಡುವ ಯಶಸ್ಸು ನಿಮ್ಮದಾಗಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘ ಇದರ ಸಿಇಒ ಸ್ವರ್ಣಗೌರಿ ಟೈಲರಿಂಗ್ ಕಲಿಯುವುದರಿಂದ ಬೇರೆ ಬೇರೆ ರೀತಿಯ ಸ್ವ ಉದ್ಯೋಗದ ಅವಕಾಶವಿರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಯಾರಿಗೂ ಅವಲಂಬಿತವಾಗದೆ ಸ್ವಾವಲಂಬಿ ಜೀವನವನ್ನು ನಡೆಸುವುದು ಅತ್ಯಗತ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟೈಲರಿಂಗ್ ತರಬೇತುದಾರ ಗೀತಾ ತರಬೇತಿಯಲ್ಲಿ ತಿಳಿಸಿಕೊಟ್ಟ ಹೊಲಿಗೆಯ ವಿಧಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ, ತಮಗೆ ಶಿಬಿರಾರ್ಥಿಗಳಿಂದ ಕಲಿಯುವ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿತ್ತು ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀ ದುರ್ಗಾ ಮಾತೃ ಮಂಡಳಿಯಿಂದ ಹಾಗೂ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಕೊಕ್ಕಡ ಇವರುಗಳು ಸೇವಭಾರತಿ ಸಂಸ್ಥೆಗೆ 2 ಟೈಲರಿಂಗ್ ಮಿಶಿನ್ ಅನ್ನು ನೀಡಿ ಮಹಿಳೆಯರ ಸ್ವ ಉದ್ಯೋಗಕ್ಕೆ ದಾರಿದೀಪವಾಗಿದ್ದಾರೆ.

ಸಂಸ್ಥೆಯ ಪರವಾಗಿ ಗೀತಾ ಹಾಗೂ 1 ತಿಂಗಳುಗಳ ಕಾಲ ಶಿಬಿರವನ್ನು ನಡೆಸಲು ಸಂಪೂರ್ಣ ಸಹಕಾರವನ್ನು ನೀಡಿದ ಪುರುಷೋತ್ತಮ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರು ಹಾಗೂ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಕುಶಾಲಪ್ಪ ಗೌಡ, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಉಪಾಧ್ಯಕ್ಷ ಈಶ್ವರ್ ಭಟ್ ಹಿತ್ತಿಲು, ಕೊಕ್ಕಡ ಶ್ರೀರಾಮ ಸೇವಾ ಟ್ರಸ್ಟ್(ರಿ.) ಅಧ್ಯಕ್ಷ ಹಾಗೂ ಕನ್ಯಾಡಿ ಸೇವಾಭಾರತಿ(ರಿ) ಕಾರ್ಯದರ್ಶಿ ಬಾಲಕೃಷ್ಣ, ಶ್ರೀ ದುರ್ಗಾ ಮಾತೃ ಮಂಡಳಿಯ ಖಜಾಂಚಿ ಬಬಿತಾ, ಶ್ರೀ ದುರ್ಗಾ ಮಾತೃ ಮಂಡಳಿಯ ಸದಸ್ಯೆ ಸುಮತಿ, ಟೈಲರಿಂಗ್ ತರಬೇತುದಾರ ಗೀತಾ ಕೊಕ್ಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾಭಾರತಿ ಕನ್ಯಾಡಿಯ ಅಕ್ಷತಾ ಸ್ವಾಗತಿಸಿ, ಸುಮ ಕಾರ್ಯಕ್ರಮ ನಿರೂಪಿಸಿದರು, ಶ್ರೀರಾಮ ಸೇವಾ ಟ್ರಸ್ಟ್(ರಿ.) ಸದಸ್ಯೆ ಪ್ರಮೀಳಾ ವಂದಿಸಿದರು. ಒಟ್ಟು 63 ಮಂದಿ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

error: Content is protected !!