ಬೆಳ್ತಂಗಡಿ : ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕಿಶೋರ್ ಕುಮಾರ್ ಅವರು 2000 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಸಂಘಟನೆ ಬಲ ಮತ್ತು ಗ್ರಾ.ಪಂ. ಸದಸ್ಯರ ಬಲದಿಂದ ವಿಶ್ವಾಸಪೂರ್ವಕವಾಗಿ ಹೇಳುತ್ತಿದ್ದೇನೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದರು.
ಉಜಿರೆ ಓಷಿಯನ್ ಪರ್ಲ್ ನಲ್ಲಿ ಅ.18ರಂದು ನಡೆದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯ ಸರಕಾರ ಭ್ರಷ್ಟಾಚಾರ ಮತ್ತು ಮತಾಂದರನ್ನು ಓಲೈಸುವ ಸರಕಾರವಾಗಿದೆ. ಮೂಡಾ ಹಗರಣದಲ್ಲಿ ಕಾನೂನು ಕುಣಿಕೆ ಬಿಗಿಯಾಗುತ್ತಿದೆ ಎಂದು ಅರಿತು ಅಲ್ಲಿಂದ ಪಾರಾಗಲು ಯೋಚನೆ ಮಾಡಿ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಲ್ಲಿದ್ದ ಮೂಡಾ ಸೈಟ್ ಹಿಂದಿರುಗಿಸಲಾಗಿದೆ. ಸರಕಾರ ಜನಸ್ಪಂದನೆ ಇಲ್ಲದ ಸರಕಾರವಾಗಿದ್ದು, ಐಸಿಯುನಲ್ಲಿದೆ. ಕೇವಲ ವಾಲ್ಮೀಕಿ ಮಾತ್ರವಲ್ಲ, ಎಲ್ಲ ನಿಗಮದಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇಂದು ದ.ಕ.ಜಿಲ್ಲೆಯಲ್ಲೇ 45 ಸಾವಿರ ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗಿದೆ. ಸರಕಾರ ಬಂದಮೇಲೆ ಬಡವರ ಸೌಲಭ್ಯಕ್ಕೂ ಕಲ್ಲು ಬಿದ್ದಿದೆ ಎಂದರು.
ನಮ್ಮ ಅಭ್ಯರ್ಥಿಗೆ 2000 ಮತಗಳ ಅಂತರದಿಂದ ಗೆಲುವು:
ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕಿಶೋರ್ ಕುಮಾರ್ ಅವರು 2000 ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಸಂಘಟನೆ ಬಲ ಮತ್ತು ಗ್ರಾ.ಪಂ. ಸದಸ್ಯರ ಬಲದಿಂದ ವಿಶ್ವಾಸಪೂರ್ವಕವಾಗಿ ಹೇಳುತ್ತಿದ್ದೇನೆ. ಎರಡು ಜಿಲ್ಲೆಯಲ್ಲಿ ಯಾವುದೇ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಗ್ರಾ.ಪಂ. ಸದಸ್ಯರನ್ನು ಹೊಂದಿಲ್ಲ. ವಾಸ್ತವವಾಗಿ ಅವಿರೋಧ ಆಯ್ಕೆಗೆ ಅವಕಾಶ ಕೊಡಬೇಕಿತ್ತು. ಆದರೆ ಹಣ ಬಲ ಮತ್ತು ಅಧಿಕಾರ ಬಲದಿಂದ ಏನಾದರು ಮಾಡಬಹುದೆಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ನಮ್ಮ ಸಂಘಟನೆ ಶಾಸಕರು ಮತ್ತು ಸಂಸದರು, ಎಲ್ಲ ಗ್ರಾ.ಪಂ. ಸದಸ್ಯರು ಅವರ ಸವಾಲನ್ನು ಸ್ವೀಕರಿಸಿ ಒಟ್ಟು ಒಂದು ತಂಡವಾಗಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಭೆ ನಡೆಸುವ ಮೂಲಕ ನಮ್ಮ ಗೆಲುವನ್ನು ಖಾತ್ರಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ 2000 ಮತಗಳ ಅಂತರದಲ್ಲಿ ಗೆಲ್ಲಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರಕಾರದ ವಿರುದ್ಧ ಹುಬ್ಬಳಿ ಚಲೋ ಹೋರಾಟ:
ರಾಜ್ಯ ಸರಕಾರ ಕಮ್ಯೂನಲ್ ಮತ್ತು ಕ್ರಿಮಿನಲ್‌ಗಳಿಗೆ ಬೆಂಬಲಿಸುವ ಸರಕಾರವಾಗಿದೆ. 8 ವರ್ಷದ ಹಿಂದೆ ಪಿಎಫ್‌ಐ ಮತ್ತು ಎಸ್ ಡಿಪಿಐ ಮೇಲಿನ 2000 ಹೆಚ್ಚು ಮೊಕದ್ದಮೆಗಳನ್ನ ವಾಪಾಸು ಪಡೆದ ಪರಿಣಾಮ ರಾಜ್ಯದಲ್ಲಿ 21 ಹಿಂದು ಕಾರ್ಯಕರ್ತರ ಹತ್ಯೆಗೆ ಕಾರಣವಾಯಿತು. ಈಗ ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿ ಪ್ರಕರಣವನ್ನು ಕೂಡ ಹಿಂಪಡೆಯುವ ಕೆಟ್ಟ ಕೆಲಸವನ್ನ ಈ ಸರಕಾರ ಮಾಡಲು ಹೊರಟಿದೆ. ಈಗಾಗಲೆ ರಾಜ್ಯಾಧ್ಯಕ್ಷರ ಜತೆ ಚರ್ಚೆ ನಡೆಸಿದ್ದೇವೆ. ಸಂಪುಟದಲ್ಲಿನ ನಿರ್ಣಯ ವಾಪಾಸು ಪಡೆಯಬೇಕೆಂದು ಆಗ್ರಹಿಸಿ ಸರಕಾರದ ವಿರುದ್ಧ ಚುನಾವಣೆ ಮುಗಿದ ತಕ್ಷಣ ಹುಬ್ಬಳಿ ಚಲೋ ನಡೆಸಲಿದ್ದೇವೆ, ಜತೆಗೆ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಲಿದ್ದೇವೆ ಎಂದು ಹೇಳಿದರು.
ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕ ಹರೀಶ್ ಪೂಂಜ ಸಹಿತ ಜಿಲ್ಲೆ, ತಾಲೂಕಿನ ಸ್ಥಳೀಯ ಪ್ರಮುಖ ನಾಯಕರು ಉಪಸ್ಥಿತರಿದ್ದರು.