ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಗುರುಪ್ರಸಾದ್ ಅವರು ಸಾಲದ ಬಾಧೆಯಿಂದ ಬಳಲುತ್ತಿದ್ದರು. ಅವರು ನಿರ್ದೇಶನ ಮಾಡಿದ್ದ ಇತ್ತೀಚೆಗಿನ ಸಿನಿಮಾ ‘ರಂಗನಾಯಕ’ ಹೀನಾಯ ಸೋಲು ಕಂಡಿತ್ತು. ‘ರಂಗನಾಯಕ’ ಸಿನಿಮಾದ ಫ್ಲಾಪ್ ಬಳಿಕ ಗುರುಪ್ರಸಾದ್ ಸಾಲಗಳಿಗೆ ಸಿಲುಕಿದ್ದರು. ಮಾತ್ರವಲ್ಲದೆ ಕೆಲ ತಿಂಗಳ ಹಿಂದೆ ಗುರುಪ್ರಸಾದ್ ಎರಡನೇ ಮದುವೆ ಸಹ ಆಗಿದ್ದರು ಎನ್ನಲಾಗುತ್ತಿದೆ. ಇದೀಗ ಏಕಾ-ಏಕಿ ನೇಣಿಗೆ ಕೊರಳೊಡ್ಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಟಾಟಾ ನ್ಯೂ ಹಾವೆಲ್ ಅಪಾರ್ಟ್ಮೆಂಟ್ ನಲ್ಲಿ ಕಳೆದ ಎಂಟು ತಿಂಗಳಿಂದಲೂ ಗುರುಪ್ರಸಾದ್ ವಾಸವಿದ್ದರು, ಅದೇ ಮನೆಯಲ್ಲಿ ಈಗ ಗುರುಪ್ರಸಾದ್ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬಗ್ಗಿ ನೋಡಿದಾಗ ಗುರುಪ್ರಸಾದ್ ಶವ ಫ್ಯಾನಿಗೆ ನೇತಾಡುತ್ತಿರುವುದು ಕಂಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುಪ್ರಸಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಿದ್ದಾರೆ ಪೊಲೀಸರು.
ಗುರುಪ್ರಸಾದ್ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ‘ಮಠ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಗುರುಪ್ರಸಾದ್ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು. ಅದಾದ ಬಳಿಕ ನಿರ್ದೇಶಿಸಿದ ‘ಎದ್ದೇಳು ಮಂಜುನಾಥ’ ಭಾರಿ ದೊಡ್ಡ ಹಿಟ್ ಆಯ್ತು, ಕಲ್ಟ್ ಕಾಮಿಡಿ ಸಿನಿಮಾ ಆಗಿ ಗುರುತಿಸಲಾಗುತ್ತಿದೆ. ಅದಾದ ಬಳಿಕ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮಾಡಿದರು. ಈ ಸಿನಿಮಾ ಮೂಲಕ ಡಾಲಿ ಧನಂಜಯ್ ನಾಯಕನಾಗಿ ಪರಿಚಯಗೊಂಡರು. ಅದಾದ ಬಳಿಕ 2017 ರಲ್ಲಿ ‘ಎರಡನೇ ಸಲ’ ನಿರ್ದೇಶಿಸಿದರು. ಆ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು.
‘ಎರಡನೇ ಸಲ’ ಸಿನಿಮಾ ಆದಮೇಲೆ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ಗುರುಪ್ರಸಾದ್ ಇದೇ ವರ್ಷದಲ್ಲಿ ಜಗ್ಗೇಶ್ ಅವರೊಟ್ಟಿಗೆ ‘ರಂಗನಾಯಕ’ ಸಿನಿಮಾ ಮಾಡಿದರು. ಸಿನಿಮಾ ಚಿತ್ರಮಂದಿರದಲ್ಲಿ ಅಟ್ಟರ್ ಫ್ಲಾಪ್ ಆಯ್ತು. ‘ರಂಗನಾಯಕ’ ಸಿನಿಮಾದ ಸೋಲಿನಿಂದ ವಿಚಲಿತರಾಗಿದ್ದ ಗುರುಪ್ರಸಾದ್ ಸಾಕಷ್ಟು ಸಾಲಗಳಿಗೆ ಸಿಲುಕಿಕೊಂಡಿದ್ದರು. ಕೊನೆಗೆ ಈಗ ನಿಧನ ಹೊಂದಿದ್ದಾರೆ. ಕೌಟುಂಬಿಕ ಕಲಹಗಳ ಕಾರಣದಿಂದಾಗಿ ಗುರುಪ್ರಸಾದ್ ಅವರ ಮೊದಲ ಮದುವೆ ಮುರಿದು ಬಿದ್ದಿತ್ತು, ಕೆಲ ತಿಂಗಳ ಹಿಂದಷ್ಟೆ ಅವರು ಎರಡನೇ ಮದುವೆ ಆಗಿದ್ದರು.