ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸುವ 103 ಜಮೀನುಗಳ ಸರ್ವೇ ನಂಬರ್,ವಿಸ್ತೀರ್ಣ ಉಲ್ಲೇಖ, ಮಾರಾಟ, ಲೀಸ್, ಅಭಿವೃದ್ಧಿಗೆ ನಿರ್ಬಂಧ
ಕೊಕ್ಕಡ: ಪೆರಿಯಶಾಂತಿ-ಧರ್ಮಸ್ಥಳ-ಉಜಿರೆ ನಡುವಿನ ರಾಷ್ಟ್ರೀಯ ಹೆದ್ದಾರಿಯ ಸ್ಪರ್ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ರಾಷ್ಟ್ರೀಯ ಹೆದ್ದಾರಿ ಸಚಿವಾಲಯದಿಂದ ಈ ಕುರಿತು ಎರಡನೇ ಅಧಿಸೂಚನೆ ಪ್ರಕಟಗೊಂಡಿದ್ದು, 103 ಜಮೀನುಗಳಿಗೆ ಸಂಬಂಧಿಸಿದ ಸರ್ವೇ ನಂಬರ್, ಜಮೀನುಗಳ ವಿಸ್ತೀರ್ಣ ಪ್ರಕಟಿಸಲಾಗಿದೆ.
ಮಂಗಳೂರು – ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿ 73ರಿಂದ ಉಜಿರೆಯಲ್ಲಿ ಬಲಕ್ಕೆ ಧರ್ಮಸ್ಥಳ ಮಾರ್ಗವಾಗಿ ಪೆರಿಯಶಾಂತಿಗೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ನ್ನು ಸಂಪರ್ಕಿಸುವ 28.49 ಕಿಮೀ. ಉದ್ದದ ಸ್ಪರ್ ರಸ್ತೆ ಇದಾಗಿದೆ. ಈಗ ಸಚಿವಾಲಯವು ಪ್ರಕಟಿಸಿರುವ ಭೂಸ್ವಾಧೀನ ಅಧಿಸೂಚನೆಯು ಎರಡನೆಯ(3ಎ) ಹಂತದ್ದಾಗಿದ್ದು, ಭೂಮಾಲೀಕರ ಅಹವಾಲು ಪರಿಶೀಲನೆಯ ಬಳಿಕ ಅಂತಿಮ ಅಧಿಸೂಚನೆಯನ್ನು(3ಡಿ) ಸಚಿವಾಲಯವು ಪ್ರಕಟಿಸಲಿದೆ.
ಅಧಿಸೂಚನೆಯಲ್ಲಿ ಏನಿದೆ?:
ರಸ್ತೆ ನಿರ್ಮಾಣ – ಅಗಲೀಕರಣ ಯೋಜನೆಗೆ ಸಂಬಂಧಿಸಿ ಕಟ್ಟಡ ಸಹಿತ ಹಾಗೂ ಕಟ್ಟಡ ರಹಿತ ಸರಕಾರಿ ಮತ್ತು ಖಾಸಗಿ ಭೂಮಿಗಳ ಸ್ವಾಧೀನಕ್ಕಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅ.22ರಂದು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 (1956ರ 48)ರ ಪ್ರಕಾರ ನಿಯಮ 3ಎ ಉಪನಿಯಮ(1)ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಜಮೀನುಗಳ ಭೂಸ್ವಾಧೀನಕ್ಕೆ ಸೂಚನೆ ನೀಡಲಾಗಿದೆ. ಜಮೀನುಗಳ ಮಾಲೀಕರು ಅಥವಾ ಸಂಬಂಧಪಟ್ಟವರು ಪ್ರಕಟಣೆಯ 21 ದಿನಗಳೊಳಗೆ ಕಾಯ್ದೆಯ ಕಲಂ 3ಸಿ(1)ರಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ.
ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ, ರಾಷ್ಟ್ರೀಯ ಹೆದ್ದಾರಿಗಳು -73 ಮತ್ತು 275, ವಿಠಲ್ ಆರ್ಕೇಡ್ ಒಂದನೇ ಮಹಡಿ, ಕೊಟ್ಟಾರ ಚೌಕಿ, ಅಶೋಕ ನಗರ, ಮಂಗಳೂರು – 575006 ಇಲ್ಲಿಗೆ ಲಿಖಿತವಾಗಿ ಸಕಾರಣಗಳೊಂದಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು. ಸಕ್ಷಮ ಪ್ರಾಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದವರನ್ನು ಅಥವಾ ಅವರ ವಕೀಲರ ಮೂಲಕ ವಿಚಾರಣೆ ನಡೆಸಿ ಪರಿಶೀಲನೆ ನಡೆಸುತ್ತಾರೆ. ಕಾಯ್ದೆಯ ಕಲಂ 3(ಸಿ)(2)ರ ಅನ್ವಯ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ವಿಚಾರಣೆ ನಡೆಸಿ ಹೊರಡಿಸುವ ಆದೇಶವು ಅಂತಿಮವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಮೀನು ಮಾರಾಟ ಮಾಡುವಂತಿಲ್ಲ:
ಹೆದ್ದಾರಿ ಸಚಿವಾಲಯವು ಪ್ರಕಟಿಸಿರುವ ಅಧಿಸೂಚನೆಯಲ್ಲಿ ಒಳಗೊಂಡಿರುವ ಜಮೀನುಗಳನ್ನು ಮಾರುವಂತಿಲ್ಲ ಅಥವಾ ಲೀಸ್‌ಗೆ ನೀಡುವಂತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೊದಲ ಅಧಿಸೂಚನೆ:
ಈ ರಸ್ತೆಯ ಕುರಿತು ಮಾರ್ಚ್ 12ರಂದು ಮೊದಲ ಬಾರಿ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಸುಮಾರು 14 ಹೆಕ್ಟೇರ್ (ಸುಮಾರು 35 ಎಕರೆ) ಜಾಗವನ್ನು ಸೇರ್ಪಡೆಗೊಳಿಸಲಾಗಿತ್ತು. ಆದರೆ, ಈಗ ಪ್ರಕಟಗೊಂಡಿರುವ ಅಧಿಸೂಚನೆಯಲ್ಲಿ 11.92 ಎಕರೆಯನ್ನು ಮಾತ್ರ ಕಾಣಿಸಲಾಗಿದೆ. ಅಂತಿಮ ಅಧಿಸೂಚನೆ (3ಡಿ) ಪ್ರಕಟವಾಗುವ ಹೊತ್ತಿಗೆ ಇನ್ನಷ್ಟು ಜಮೀನು ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈಗ ಪ್ರಕಟಗೊಂಡಿರುವ ಅಧಿಸೂಚನೆಯ ಪ್ರಕಾರ ಒಳಗೊಂಡಿರುವ ಜಮೀನುಗಳ ವಿವರ ಗ್ರಾಮವಾರು ಈ ಕೆಳಗೆ ನೀಡಲಾಗಿದೆ.
613.65 ಕೋಟಿ ರೂ. ಯೋಜನೆ:
ಐತಿಹಾಸಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಸ್ಪರ್ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿ ಹೊಂದಲಿದೆ. ಉಜಿರೆಯಿಂದ ಧರ್ಮಸ್ಥಳದವರೆಗೆ ಚತುಷ್ಪಥ ರಸ್ತೆ ಹಾಗೂ ಧರ್ಮಸ್ಥಳದಿಂದ ಕೊಕ್ಕಡದ ಮೂಲಕ ಪೆರಿಯಶಾಂತಿಯವರೆಗೆ 10 ಮೀಟರ್ ಅಗಲದ ದ್ವಿಪಥ ರಸ್ತೆಯಾಗಿ ಅಭಿವೃದ್ಧಿಯಾಗುವ ನಿರೀಕ್ಷೆ ಇದೆ. ಈ ರಸ್ತೆ ಅಭಿವೃದ್ಧಿ ಹೊಂದುವುದರಿಂದ ಧರ್ಮಸ್ಥಳ, ಸುಬ್ರಮಣ್ಯದ ಸಂಚಾರ ಸುಲಭವಾಗಲಿದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರ್ಕಾರ 613.65 ಕೋಟಿ ರೂ. ಮೊತ್ತಕ್ಕೆ ಮಂಜೂರಾತಿ ನೀಡಿದೆ. ಯೋಜನೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಫೆ.22ರಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದರು.
ಹೆದ್ದಾರಿ ಭೂಸ್ವಾಧೀನ ಅಧಿಸೂಚನೆಯ ಮಾಹಿತಿ
ಕೌಕ್ರಾಡಿ ಗ್ರಾಮದಲ್ಲಿ ಜಮೀನಿನ ಸಂಖ್ಯೆ 20, ವಿಸ್ತೀರ್ಣ 1.34ಎಕರೆ, ಕೊಕ್ಕಡ ಗ್ರಾಮದಲ್ಲಿ ಜಮೀನಿನ ಸಂಖ್ಯೆ 21, ವಿಸ್ತೀರ್ಣ 87 ಸೆಂಟ್ಸ್, ನಿಡ್ಲೆ ಗ್ರಾಮದಲ್ಲಿ ಜಮೀನಿನ ಸಂಖ್ಯೆ 32, ವಿಸ್ತೀರ್ಣ 4.53ಎಕರೆ, ಧರ್ಮಸ್ಥಳ ಗ್ರಾಮದಲ್ಲಿ ಜಮೀನಿನ ಸಂಖ್ಯೆ 24, ವಿಸ್ತೀರ್ಣ 4.99ಎಕರೆ, ಉಜಿರೆ ಗ್ರಾಮದಲ್ಲಿ ಜಮೀನಿನ ಸಂಖ್ಯೆ 6, ವಿಸ್ತೀರ್ಣ 18 ಸೆಂಟ್ಸ್.