ನೆಲ್ಯಾಡಿ ಪಿಎಂಶ್ರೀ ಸರಕಾರಿ ಶಾಲಾ ಎಸ್‍ಡಿಎಂಸಿಗೆ ಪೈಪೋಟಿ – ಚುನಾವಣೆಅಧ್ಯಕ್ಷರಾಗಿ ದಿನಕರ ಕೆ.ಹೆಚ್., ಉಪಾಧ್ಯಕ್ಷರಾಗಿ ನಸೀಮ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಸರಕಾರಿ ಶಾಲೆಯ ಎಸ್‍ಡಿಎಂಸಿಗೆ ಸೇರಲು ಹಿಂದೇಟು ಹಾಕುವವರೇ ಹೆಚ್ಚು. ಅಂತಹುದರಲ್ಲಿ ನೆಲ್ಯಾಡಿ ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಎಸ್‍ಡಿಎಂಸಿಗೆ ಸೇರಲು ಪೋಷಕರಲ್ಲಿ ಪೈಪೋಟಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನ.20ರಂದು ಚುನಾವಣೆಯ ಮೂಲಕ ಸದಸ್ಯರ, ಉಪಾಧ್ಯಕ್ಷರ, ಅಧ್ಯಕ್ಷರ ಆಯ್ಕೆ ನಡೆಯಿತು.

ಮುಂದಿನ ಮೂರು ವರ್ಷದ ಅವಧಿಗೆ ಹೊಸ ಎಸ್‍ಡಿಎಂಸಿ ರಚನೆ ನಿಟ್ಟಿನಲ್ಲಿ ನ.20ರಂದು ಪೋಷಕರ ಸಭೆ ಕರೆಯಲಾಗಿತ್ತು. ಸದಸ್ಯ ಸ್ಥಾನಕ್ಕೆ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದ ಹಿನ್ನೆಲೆಯಲ್ಲಿ ಚುನಾವಣೆ ಮೂಲಕ ನೂತನ ಸದಸ್ಯರ ಆಯ್ಕೆ ನಡೆಯಿತು. ಸದಸ್ಯರ ಆಯ್ಕೆ ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷರಾಗಿ ದಿನಕರ ಕೆ.ಹೆಚ್.ಹೊಸಮನೆ, ಉಪಾಧ್ಯಕ್ಷರಾಗಿ ನಸೀಮ, ಸದಸ್ಯರಾಗಿ ವಿಮಲ, ಸ್ವಾತಿಕೃಷ್ಣಪ್ಪ, ಯಶೋಧ, ಅಬ್ದುಲ್ ಜಬ್ಬಾರ್, ಉಸ್ಮಾನ್ ಕೋಲ್ಪೆ, ಇಲ್ಯಾಸ್, ಇಸಾಕ್, ಬಬಿತಾ, ಲಿಸ್ಸಿ ಜೇಮ್ಸ್, ಸೀನಾ, ಸುವರ್ಣಲತಾ, ವಿಶ್ವನಾಥ, ಪ್ರಸಾದ್ ಕೆ.ಪಿ.ಗೋಳಿತ್ತೊಟ್ಟು, ಕುಶಾಲಪ್ಪ, ಜನಾರ್ದನ ಪಟೇರಿ, ಸುಪ್ರೀತಾ ಚುನಾಯಿತರಾದರು.

18 ಸ್ಥಾನಕ್ಕೆ 25 ಆಕಾಂಕ್ಷಿಗಳು:
ನೆಲ್ಯಾಡಿ ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿಯಿಂದ 8ನೇ ತರಗತಿ ತನಕ ಒಟ್ಟು 423 ಮಕ್ಕಳಿದ್ದಾರೆ. ಎಸ್‍ಡಿಎಂಸಿಯ ಒಟ್ಟು 18 ಸದಸ್ಯ ಸ್ಥಾನವನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಗೊಳಿಸಿ ಹಂಚಲಾಗಿತ್ತು. ಅದರಂತೆ ಎಸ್‍ಸಿ 2, ಎಸ್‍ಟಿ 1, ಅಲ್ಪಸಂಖ್ಯಾತರಿಗೆ 8 ಹಾಗೂ ಇತರರಿಗೆ 7 ಸ್ಥಾನ ನಿಗದಿಗೊಳಿಸಲಾಗಿತ್ತು. ಎಸ್‍ಟಿ 1 ಸ್ಥಾನಕ್ಕೆ ವಿಮಲ ಅವಿರೋಧವಾಗಿ ಆಯ್ಕೆಯಾದರು. ಎಸ್‍ಸಿ 2 ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳಿದ್ದು ಸ್ವಾತಿಕೃಷ್ಣಪ್ಪ, ಯಶೋಧ ಆಯ್ಕೆಯಾದರು. ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ 8 ಸ್ಥಾನಕ್ಕೆ 11 ಆಕಾಂಕ್ಷಿಗಳಿದ್ದು ಅಬ್ದುಲ್ ಜಬ್ಬಾರ್, ಉಸ್ಮಾನ್ ಕೋಲ್ಪೆ, ನಸೀಮ, ಇಲ್ಯಾಸ್, ಇಸಾಕ್, ಬಬಿತಾ, ಲಿಸ್ಸಿ ಜೇಮ್ಸ್, ಸೀನಾ ಆಯ್ಕೆಯಾದರು. ಇತರರಿಗೆ ಮೀಸಲಾಗಿದ್ದ 7 ಸ್ಥಾನಕ್ಕೆ ಸುವರ್ಣಲತಾ, ವಿಶ್ವನಾಥ, ಪ್ರಸಾದ್ ಕೆ.ಪಿ.ಗೋಳಿತ್ತೊಟ್ಟು, ದಿನಕರ ಕೆ.ಹೆಚ್.ಹೊಸಮನೆ, ಕುಶಾಲಪ್ಪ, ಜನಾರ್ದನ ಪಟೇರಿ, ಸುಪ್ರೀತಾ ಆಯ್ಕೆಯಾದರು. ಎಸ್‍ಸಿಗೆ ಮೀಸಲು ಸ್ಥಾನಕ್ಕೆ ರಮೇಶ, ಅರುಣ, ಅಲ್ಪಸಂಖ್ಯಾತ ಮೀಸಲು ಸ್ಥಾನಕ್ಕೆ ನಝೀರ್ ಖಾನ್, ಫೌಝಿಯಾ, ನಝೀಮ ಹಾಗೂ ಇತರರಿಗೆ ಮೀಸಲಾಗಿದ್ದ ಸ್ಥಾನಕ್ಕೆ ಪ್ರತಿಭಾ, ಲೀಲಾವತಿ ಅವರು ಸ್ಪರ್ಧಿಸಿದ್ದರು.

ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ:
ಅಧ್ಯಕ್ಷ ಸ್ಥಾನಕ್ಕೆ ದಿನಕರ ಕೆ.ಹೆಚ್.ಹೊಸಮನೆ ಹಾಗೂ ಅಬ್ದುಲ್ ಜಬ್ಬಾರ್ ಅವರ ನಡುವೆ ಸ್ಪರ್ಧೆ ನಡೆದಿದ್ದು ಚುನಾವಣೆಯಲ್ಲಿ ದಿನಕರ ಕೆ.ಹೆಚ್.ಹೊಸಮನೆ 11 ಮತ ಪಡೆದುಕೊಂಡು ಆಯ್ಕೆಯಾದರು. ಅಬ್ದುಲ್ ಜಬ್ಬಾರ್ 7 ಮತ ಪಡೆದುಕೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ನಸೀಮ ಹಾಗೂ ಸುವರ್ಣಲತಾ ನಡುವೆ ಸ್ಪರ್ಧೆ ಏರ್ಪಟ್ಟು ಚುನಾವಣೆಯಲ್ಲಿ ಇಬ್ಬರು ತಲಾ 9 ಮತ ಪಡೆದುಕೊಂಡರು. ಬಳಿಕ ನಡೆದ ಚೀಟಿ ಎತ್ತುವಿಕೆಯಲ್ಲಿ ನಸೀಮ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.

ನೆಲ್ಯಾಡಿ ಕ್ಲಸ್ಟರ್ ಸಿ ಆರ್ ಪಿ ಪ್ರಕಾಶ್ ಬಾಕಿಲ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯಶಿಕ್ಷಕಿ ವೀಣಾ ಮಸ್ಕರೇಞನ್ ಹಾಗೂ ಶಿಕ್ಷಕರು ಸಹಕರಿಸಿದರು. ನೆಲ್ಯಾಡಿ ಗ್ರಾ.ಪಂ.ಸದಸ್ಯ ಸಲಾಂ ಬಿಲಾಲ್, ಉಪಾಧ್ಯಕ್ಷೆ ರೇಷ್ಮಾಶಶಿ ಉಪಸ್ಥಿತರಿದ್ದರು.

216 ಪೋಷಕರು ಭಾಗಿ:
ಶಾಲೆಯಲ್ಲಿ 423 ಮಕ್ಕಳಿದ್ದು 287 ಪೋಷಕರಿದ್ದಾರೆ. ಎಸ್‍ಡಿಎಂಸಿ ರಚನೆಗಾಗಿ ನ.7ರಂದು ಸಭೆ ಕರೆಯಲಾಗಿದ್ದರೂ ಪೋಷಕರ ಸಂಖ್ಯೆ ಕಡಿಮೆ ಹಿನ್ನಲೆಯಲ್ಲಿ ನ.20ಕ್ಕೆ ಮುಂದೂಡಲಾಗಿತ್ತು. ಈ ದಿನ ನಡೆದ ಸಭೆಗೆ 216 ಪೋಷಕರು ಹಾಜರಾಗಿದ್ದರು. ಎಸ್‍ಡಿಎಂಸಿ ಸದಸ್ಯರ ಆಯ್ಕೆ ವೇಳೆ ಮಗುವಿನ ತಂದೆ, ತಾಯಿ ಇಬ್ಬರಿಗೂ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ತಮ್ಮ ಬೆಂಬಲಿಗರನ್ನೇ ಎಸ್‍ಡಿಎಂಸಿಗೆ ಆಯ್ಕೆಗೊಳಿಸುವ ನಿಟ್ಟಿನಲ್ಲಿ ಪೋಷಕರಲ್ಲಿಯೂ ಜಿದ್ದಾಜಿದ್ದಿನ ಪೈಪೋಟಿ ಕಾಣಿಸಿಕೊಂಡಿತ್ತು. ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆಯೂ ಬಿರುಸಿನ ಮತಯಾಚನೆ ನಡೆಯಿತು. ಒಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಕಡಿಮೆ ಇಲ್ಲದಂತೆ ಶಾಲಾ ಎಸ್‍ಡಿಎಂಸಿ ರಚನೆಯ ಚುನಾವಣೆಯೂ ನಡೆದಿರುವುದು ವಿಶೇಷವಾಗಿದೆ.

Leave a Reply

error: Content is protected !!