ನೆಲ್ಯಾಡಿ: ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿದೆ, ನಮ್ಮ ಮನೆ ಮನೆಯಾಗಿ ಉಳಿಯ ಬೇಕಾದ ಕೆಲಸವನ್ನು ಇಂಥ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ.ಪೋಷಕರಾದವರು ಶಿಕ್ಷಣ ಸಂಸ್ಥೆಗಳ ಜೊತೆ ಕೈಜೋಡಿಸಿಕೊಳ್ಳಬೇಕು. ಭಾಷೆ ಎಂಬುದು ನಮಗೆ ಕೇವಲ ವಿಚಾರ ವಿನಿಮಯ ಮಾಡಲು ಅಗತ್ಯವಾಗಿದೆ ಎಂದು ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಮಹೇಶ ನಿಟಿಲಾಪುರ ಹೇಳಿದರು.
ನೆಲ್ಯಾಡಿ- ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ಜ.4ರಂದು ನಡೆದ ವಿದ್ಯಾಲಯದ ವಿದ್ಯಾರ್ಥಿಗಳ ವಾರ್ಷಿಕ ಹಬ್ಬ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಕೃಷ್ಣ ಶೆಟ್ಟಿ ಮಾತನಾಡಿ ಸನಾತನ ಸಂಸ್ಕೃತಿ ಉಳಿಯುವ ಪದ್ಧತಿ ಭಾರತೀಯ ಶಿಕ್ಷಣದಲ್ಲಿ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದಾದ್ಯಂತ ವಿದ್ಯಾ ಸಂಸ್ಥೆಗಳನ್ನು ಹುಟ್ಟು ಹಾಕಿ ಸಂಸ್ಕೃತಿಯನ್ನು ಕಲಿಸುವ, ಸನಾತನ ಸಂಸ್ಕೃತಿಯನ್ನು ಉಳಿಸುವ, ದೇಶ ಕಟ್ಟುವ ಕೆಲಸವನ್ನು ಈ ಶಿಕ್ಷಣಕ್ಕೆ ಸಂಸ್ಥೆಗಳು ಮಾಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ- ಸೂರ್ಯನಗರ ಶ್ರೀರಾಮ ವಿದ್ಯಾಲಯದ ಅಧ್ಯಕ್ಷರಾದ ಡಾ.ಮುರಳಿಧರ ವಹಿಸಿದರು.
ವೇದಿಕೆಯಲ್ಲಿ ಕಡಬ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಸತ್ಯನಾರಾಯಣ ಹೆಗ್ಡೆ ನಡುಮಜಲು ನಗರ, ಕಡಬ ಮಂಜುನಾಥೇಶ್ವರ ಭಜನಾ ಪರಿಷತ್ತು ಅಧ್ಯಕ್ಷರಾದ ಸುಂದರ ಗೌಡ ಬಿಳಿನೆಲೆ, ಶಾಲಾ ಮುಖ್ಯ ಶಿಕ್ಷಕ ಗಣೇಶ್ ವಾಗ್ಲೆ ಉಪಸ್ಥಿತರಿದ್ದರು.
ಸಂಸ್ಥೆ ಕಾರ್ಯದರ್ಶಿ ಮೂಲಚಂದ್ರ ಸ್ವಾಗತಿಸಿದರು, ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ನಿರ್ದೇಶಕರಾದ ಸುಬ್ರಾಯ ಪುಣಚ ವಂದಿಸಿದರು.
ಕಾರ್ಯಕ್ರಮದಲ್ಲಿ ಸರಸ್ವತಿ ವಂದನೆ, ಶ್ರೀರಾಮ ಶಿಶುಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಾತೃಮಂಡಳಿ ಮತ್ತು ವರಮಹಾಲಕ್ಷ್ಮಿ ಪೂಜಾ ಸಮಿತಿ ಸದಸ್ಯರಿಂದ ಭಜನಾ ಸಂಭ್ರಮ, ಪ್ರತಿಭಾ ಪುರಸ್ಕಾರ, ಸಂಸ್ಥೆಯಲ್ಲಿ ಹತ್ತು ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು ಬಳಿಕ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.