ಯುವ ಜನತೆ, ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಅರಿವು ಮೂಡಿಸಬೇಕು : ಎಡನೀರು ಶ್ರೀ
ಭಕ್ತನ ಭಕ್ತಿಯಿಂದಲೂ ದೇವರ ಸಾನಿಧ್ಯ ವೃದ್ಧಿ: ಮಾಣಿಲಶ್ರೀ

ನೆಲ್ಯಾಡಿ: ಊರಿನ ದೇವಾಲಯದ ಕಾರ್ಯದಲ್ಲಿ ತೊಡಗಿಕೊಂಡು ಸುಸ್ಥಿತಿಯಲ್ಲಿಡುವ ಕಾರ್ಯ ಭಕ್ತರಿಂದ ಆಗಬೇಕು. ಯುವ ಜನತೆಯಲ್ಲಿ ಧಾರ್ಮಿಕ ಶಿಕ್ಷಣ, ಅರಿವು ಮೂಡಿಸುವ ಕೆಲಸ ಶ್ರದ್ಧಾಕೇಂದ್ರಗಳ ಮೂಲಕ ಆಗಬೇಕು. ಈ ಮೂಲಕ ಧರ್ಮ, ಸಂಸ್ಕೃತಿ ಮುಂದಿನ ಪೀಳಿಗೆಗೂ ತಲುಪಬೇಕು ಎಂದು ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ನುಡಿದರು.

ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕಲಶಾಭಿಷೇಕ, ಪ್ರತಿಷ್ಠೆಯ ಜೊತೆಗೆ ಭಕ್ತನ ಭಕ್ತಿಯಿಂದಲೂ ದೇವರ ಸಾನಿಧ್ಯ ವೃದ್ಧಿಸಲಿದೆ. ದೇವಸ್ಥಾನಕ್ಕೆ ಬಂದಾಗ ಮನಸ್ಸು ಭಗವಂತನಲ್ಲಿ ತಲ್ಲೀನವಾಗಿರಬೇಕು. ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಬೇಕು. ಸಂಘರ್ಷ ಬಿಟ್ಟು ಮನಸ್ಸು ಶುದ್ಧೀಕರಣ ಆಗಬೇಕೆಂದು ಶ್ರೀ ಧಾಮ ಮಾಣಿಲದ ಶ್ರೀ ಕರ್ಮಯೋಗಿ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಉಜಿರೆ ಎಸ್ ಡಿ ಎಂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕುಮಾರ್ ಹೆಗ್ಡೆ, ಬೆಂಗಳೂರಿನ ಉದ್ಯಮಿ ಲಕ್ಷ್ಮೀ ನಾರಾಯಣ ಐವರ್ನಾಡು, ಲೋಕೋಪಯೋಗಿ ಇಲಾಖೆ ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅಭಿಯಂತರ ಪ್ರಮೋದ್ ಕುಮಾರ್.ಕೆ.ಕೆ., ಸಂದರ್ಭೋಚಿತವಾಗಿ ಮಾತನಾಡಿದರು. ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಉಜಿರೆ ಎಸ್ ಡಿ ಎಂ ಆಸ್ಪತ್ರೆಯ ಆಡಳಿತ ನಿರ್ದೇಶಕ ಜನಾರ್ದನ ಎಂ., ಶಿರ್ಲಾಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಿನೇಶ್ ಶೆಟ್ಟಿ, ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಶಿವಾನಂದ ಕಾರಂತ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಗರ್ತ, ನೀರಾವರಿ ಸಮಿತಿ ಸಂಚಾಲಕ ವಿಠಲ ಮಡಿವಾಳ ಅಗರ್ತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನುವಂಶಿಕ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ ಹಾಗೂ ಶಾಂತಾ ಸರಳಾಯ ದಂಪತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಪಾಲೇರಿ ಹಾಗೂ ಪ್ರಜ್ಞಾ ದಂಪತಿ ಸ್ವಾಮೀಜಿಗೆ ಗೌರವಾರ್ಪಣೆ ಸಲ್ಲಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಗಳಾದ ಜನಾರ್ದನ ಗೌಡ ಬರೆಮೇಲು ಸ್ವಾಗತಿಸಿ, ಮಹೇಶ್ ಆಚಾರ್ಯ ಪಾತೃಮಾಡಿ ವಂದಿಸಿದರು. ಗೇರುಕಟ್ಟೆ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ವೀಣಾ ರಾಮಕೃಷ್ಣ ಭಟ್, ಉಷಾ ಪಾರ್ವತಿ, ವೈಶಾಲ್ಯ ಪ್ರಾರ್ಥಿಸಿದರು.
ವೈದಿಕ ಕಾರ್ಯಕ್ರಮ:
ಬೆಳಿಗ್ಗೆ ಉಷಾ:ಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ತ್ರಿಕಾಲ ಪೂಜೆ, ದಹನ ಪ್ರಾಯಶ್ಚಿತ್ತ, ಸ್ವಸ್ವತತ್ತ್ವ ಹೋಮ, ತತ್ವಕಲಶ ಅಭಿಷೇಕ, ಅನುಜ್ಞಾ ಕಲಶ ಅಭಿಷೇಕ, ಮಧ್ಯಾಹ್ನ ತ್ರಿಕಾಲ ಪೂಜೆ, ಆಶ್ಲೇಷ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆ, ಅಂಕುರ ಪೂಜೆ, ಕುಂಡ ಶುದ್ಧಿ, ಅನುಜ್ಞಾ ಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಬಿಂಬಶುದ್ಧಿ, ಕಲಶ ಪೂಜೆ, ಅಧಿವಾಶ ಹೋಮ, ಕಲಶಾಧಿವಾಸ, ತ್ರಿಕಾಲ ಪೂಜೆ, ಮಹಾಪೂಜೆ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಭಜನೆ:
ಬೆಳಿಗ್ಗೆ ತಿರ್ಲೆ ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ, ಕೊಕ್ಕಡ ಶ್ರೀ ರಾಮ ಭಜನಾ ಮಂಡಳಿ, ಸಂಜೆ ಶ್ರೀ ಶಾರದಾ ಭಜನಾ ಮಂಡಳಿ ಶಾರದಾನಗರ, ರಾಮಕುಂಜ, ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ ಪ್ರವೀಣ್ ಭಂಡಾರಿ ಪುರ ಇವರ ಪ್ರಾಯೋಜಕತ್ವದಲ್ಲಿ ಬ್ರಹ್ಮ ತೇಜಸ್ಸು ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾಸಂಘ, ನೆಲ್ಯಾಡಿ ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಸತೀಶ್ ರೈ ಕೊಣಾಲುಗುತ್ತು ಹಾಗೂ ಚಿತ್ರ ಎಸ್.ರೈ ಮತ್ತು ವೆಂಕಪ್ಪ ಗೌಡ ಡೆಬ್ಬೇಲಿ ಮತ್ತು ಜಾನಕಿ ಡೆಬ್ಬೇಲಿ ಅವರ ಪ್ರಾಯೋಜಕತ್ವದಲ್ಲಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.





