


ನೆಲ್ಯಾಡಿ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಕಡಬ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮತ್ತು ಧರ್ಮಶ್ರೀ ಮಹಿಳಾ ಭಜನಾ ಮಂಡಳಿ ಕೌಕ್ರಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮಕ್ಕಳ ಕುಣಿತ ಭಜನೆಯ 27ನೇ ಭಜನಾ ಕಮ್ಮಟ ತರಬೇತಿ ಕಾರ್ಯಕ್ರಮವು ಹೊಸಮಜಲು ಮುಂದುವರಿಕ ಕೇಂದ್ರದಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕಡಬ ತಾಲೂಕಿನ ಭಜನಾ ಪರಿಷತ್ತಿನ ಅಧ್ಯಕ್ಷರೂ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ ಕಾರ್ಯದರ್ಶಿಯಾಗಿರುವ ಸುಂದರ ಗೌಡ ಬಿಳಿನೆಲೆಯವರು ಭಾಗವಹಿಸಿ, ಭಜನೆಯ ಮಹತ್ವವನ್ನು ವಿವರಿಸಿದರು. ಮಕ್ಕಳಿಗೆ ಶುಭ ಹಾರೈಸಿದ ಅವರು, ಭಜನೆ ಒಂದು ಪಾವನ ಸಾಂಸ್ಕೃತಿಕ ಪರಂಪರೆ ಆಗಿದ್ದು, ಇದರ ಮೂಲಕ ಶ್ರದ್ಧೆ ಮತ್ತು ಭಕ್ತಿಯ ಬೆಳವಣಿಗೆಯುಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನೆಲ್ಯಾಡಿ ವಲಯದ ಮೇಲ್ವಿಚಾರಕರಾದ ಆನಂದ ಡಿ.ಬಿ. ರವರು, ಭಜನೆಯಲ್ಲಿನ ತೊಡಗುವಿಕೆ ಕೇವಲ ಸಾಂಸ್ಕೃತಿಕ ಚಟುವಟಿಕೆಯಷ್ಟೇ ಅಲ್ಲ, ಅದು ಒಬ್ಬ ವ್ಯಕ್ತಿಯ ಮನೋಶಾಂತಿ ಮತ್ತು ಆಂತರಿಕ ಶುದ್ಧತೆಗೆ ಸಹಾಯಕವಾಗುತ್ತದೆ ಎಂದು ಹೇಳಿದರು. “ತನ್ನನ್ನು ಭಜನೆಯಲ್ಲಿಟ್ಟು ತೊಡಗಿಸಿಕೊಂಡರೆ ಕೆಟ್ಟ ಆಲೋಚನೆಗಳು ನಮ್ಮತ್ತ ಬರಲು ಸಾಧ್ಯವಿಲ್ಲ” ಎಂದು ಅವರು ಮನದಟ್ಟು ಮಾಡಿಸಿದರು.
ಶೌರ್ಯ ವಿಪತ್ತು ತಂಡದ ಪ್ರತಿನಿಧಿಯಾದ ರಮೇಶ್ ಬಾಣಜಾಲು ಅವರು, “ಭವಿಷ್ಯದಲ್ಲಿ ಇನ್ನಷ್ಟು ಭಜನಾ ತಂಡಗಳು ರಚನೆಯಾಗಲಿ, ಮಕ್ಕಳ ಭವಿಷ್ಯ ಉಜ್ವಲವಾಗಲಿ” ಎಂಬ ಆಶಯ ವ್ಯಕ್ತಪಡಿಸಿದರು.
ಕಟ್ಟೆಮಜಲು ಧೂಮಾವತಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಆಡಳಿತ ಸಮಿತಿಯ ಅಧ್ಯಕ್ಷರಾದ ಸದಾನಂದ ಗೌಡ ಕುಂಡಡ್ಕ ಅವರು, “ಭಜನಾ ತಂಡವು ಸದಾ ಹರಿಯುವ ನೀರಾಗಲಿ, ಇದು ಭಕ್ತರಿಗಾಗಿ ಶ್ರದ್ಧಾ ಮತ್ತು ಪರೋಪಕಾರದ ಮಾರ್ಗವಾಗಲಿ” ಎಂದು ಆಶಿಸಿದರು.
ಭಜನಾ ಪರಿಷತ್ತಿನ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಅವರು, “ನಿಮ್ಮ ಜೊತೆ ಸದಾ ನಾವಿರುತ್ತೇವೆ” ಎಂಬ ಭರವಸೆಯ ಮಾತುಗಳೊಂದಿಗೆ ಶುಭ ಹಾರೈಸಿದರು. ತರಬೇತಿದಾರರಾಗಿ ಆಗಮಿಸಿದ ತಿರುಮಲೇಶ್ವರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಧರ್ಮಶ್ರೀ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷರಾದ ಭಾರತೀಯವರು, “ಪೋಷಕರ ಸಹಕಾರ ಸದಾ ನಮ್ಮೊಡನೆ ಇರಲಿ ಮತ್ತು ಮಕ್ಕಳು ಸಂಸ್ಕೃತಿಯ ಬೆಳಕಿನಲ್ಲಿ ಬೆಳೆಯಲಿ” ಎಂಬ ತಮ್ಮ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುಟಾಣಿಗಳು ತಮ್ಮ ಗುರುಗಳಿಗೆ ಗೌರವಪೂರ್ವಕವಾಗಿ ಗುರುದಕ್ಷಿಣೆ ಅರ್ಪಿಸಿ ಆಶೀರ್ವಾದವನ್ನು ಪಡೆದರು.
ಈ ಕಾರ್ಯಕ್ರಮದಲ್ಲಿ ಕೌಕ್ರಾಡಿ ಒಕ್ಕೂಟದ ಸೇವಾ ಪ್ರತಿನಿಧಿಯಾದ ನಮಿತಾ ಶೆಟ್ಟಿಯವರು, ಭಜನಾರ್ಥಿಗಳು, ಪೋಷಕರು, ಮತ್ತು ಧರ್ಮಶ್ರೀ ಮಹಿಳಾ ಭಜನಾ ಮಂಡಳಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಧರ್ಮಶ್ರೀ ಮಹಿಳಾ ಭಜನಾ ಮಂಡಳಿಯ ಕೋಶಾಧಿಕಾರಿ ಹೇಮಾ ವಿ ಸ್ವಾಗತಿಸಿದರು, ನವ್ಯ ಪ್ರಸಾದ್ ನಿರೂಪಿಸಿದರು, ಮತ್ತು ಕಾರ್ಯದರ್ಶಿ ವಸಂತಿ ವಂದಿಸಿದರು.
ಈ ಕಾರ್ಯಕ್ರಮ ಭಜನಾ ಪರಂಪರೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡುವ ಜೊತೆಗೆ ಭಕ್ತಿಯ ಬೆಳವಣಿಗೆಗೆ ಮಹತ್ವದ ವೇದಿಕೆಯಾಗಿ ಕಾರ್ಯನಿರ್ವಹಿಸಿತು.





