

ಮೂಡುಬಿದಿರೆ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಮೂಡುಬಿದಿರೆ ಪೊಲೀಸರು ಯುವಕನನ್ನು ಬಂಧಿಸಿದ್ದು, ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆಲಂಗಾರು ಉಳಿಯದ ನಿವಾಸಿ ಪವನ್ (19) ಬಂಧಿತ ಆರೋಪಿ.
ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ವಿದ್ಯಾಗಿರಿ ಬಳಿ, ಜನತಾ ನಗರದಲ್ಲಿ ಟ್ಯೂಶನ್ ಮುಗಿಸಿ ಸೈಕಲ್ನಲ್ಲಿ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಪವನ್ ಎಂಬಾತ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸುತ್ತಾ ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಬಾಲಕಿ ಆತಂಕಗೊಂಡು ಸೈಕಲ್ ಅಲ್ಲೇ ಬಿಟ್ಟು ಓಡಿ ಹೋಗಿ ಮನೆಗೆ ಸೇರಿದ್ದಾಳೆ. ಆರೋಪಿ ಈ ಸಂದರ್ಭದಲ್ಲಿ ತನ್ನ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದನು.
ಘಟನೆ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ ಬೆನ್ನಲ್ಲೇ, ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳ ಅವಲೋಕನದ ಮೂಲಕ ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಮೂಡುಬಿದಿರೆ ಮತ್ತು ಸುತ್ತಮುತ್ತ ಇತ್ತೀಚೆಗೆ ನಡೆದ ಇದೇ ರೀತಿಯ ಪ್ರಕರಣಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು, ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಮಂಗಳವಾರ ಆಲಂಗಾರು ಬಳಿ ಪವನ್ ಅನ್ನು ಬಂಧಿಸಿದ್ದಾರೆ.
ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.






