ಸಹಾಯಕ ಆಯುಕ್ತರ ಭರವಸೆ ಮೇರೆಗೆ ಪ್ರತಿಭಟನೆ ಹಿಂತೆಗೆತ



ನೆಲ್ಯಾಡಿ: ಶಿರಾಡಿ ಗ್ರಾಮದ ಅಡ್ಡಹೊಳೆ ಪುಲ್ಲೋಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 75 ರ ಕಾಮಗಾರಿಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ಹೆದ್ದಾರಿ ಕಾಮಗಾರಿ ಪ್ರಾರಂಭವಾದ ದಿನದಿಂದ ಇಂದಿನವರೆಗೂ ಸಾರ್ವಜನಿಕರಿಗೆ ಅನೇಕ ತೊಂದರೆಗಳು ಎದುರಾಗುತ್ತಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆದರೂ ಯಾವುದೇ ಸ್ಪಂದನೆ ದೊರಕಿಲ್ಲ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಹಾಗೂ ಹಲವಾರು ಸಂಘಟನೆಗಳು ಒಗ್ಗೂಡಿ ಹೋರಾಟಕ್ಕೆ ಮುಂದಾದರು ಎಂದು ಶಿರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಮಾಜಿಕ ಮುಂದಾಳು ಎಂ.ಕೆ.ಪೌಲೋಸ್ ಹೇಳಿದರು.

ಯು-ಟರ್ನ್ ಮತ್ತು ರಸ್ತೆ ಸೌಲಭ್ಯಗಳ ಸಮಸ್ಯೆ
ಶಿರಾಡಿ ಗ್ರಾಮದ ವಾರ್ಡ್ ಸಂಖ್ಯೆ 2 ಮತ್ತು 3 ರಲ್ಲಿ ವಾಸವಾಗಿರುವ 500ಕ್ಕೂ ಹೆಚ್ಚು ಜನರಿಗೂ ತೊಂದರೆಯಾಗುವಂತೆ ಇಲ್ಲಿನ ಯು-ಟರ್ನ್ ಅನ್ನು ನೇರ ಮಾಡಲು ಸಾರ್ವಜನಿಕರು ಮನವಿ ಸಲ್ಲಿಸಿದ್ದರೂ, ಜಿಲ್ಲಾಧಿಕಾರಿಯವರು ಸ್ಥಳ ಪರಿಶೀಲನೆ ಮಾಡಿದರೂ ಯಾವುದೇ ಸ್ಪಂದನೆ ಇಲ್ಲ. ತುರ್ತಾಗಿ ಬಂದು ಯು-ಟರ್ನ್ ಅನ್ನು ಬಂದ್ ಮಾಡಲು ಹೊರಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದಲ್ಲದೇ, ಹೈಸ್ಕೂಲ್ ಬಳಿ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಫ್ಲೈಓವರ್ ನಿರ್ಮಾಣದ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆ ತಿರಸ್ಕರಿಸಿದೆ. ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ರಸ್ತೆ ಕಾಂಕ್ರೀಟಿಕರಣ ಕೂಡಾ ಸರಿಯಾಗಿ ಮಾಡಲಾಗಿಲ್ಲ. ಸಂತ ಜೋಸೆಫ್ ಚರ್ಚ್ ಬಳಿ ಇರುವ ಪಂಚಾಯಿತಿ ರಸ್ತೆ ಕಾಂಕ್ರೀಟ್ ಮಾಡುವುದಾಗಿ ಹೇಳಿ ವಂಚನೆ ಮಾಡಲಾಗಿದೆ. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ರಸ್ತೆ ಕಾಂಕ್ರೀಟ್ ಮಾಡಿ ರಸ್ತೆ ಅಗಲಿಸುವ ಭರವಸೆ ನೀಡಿದರೂ, ಅದನ್ನು ಪಾಲಿಸದೆ ಕಾರ್ಯ ನಿರ್ವಹಿಸಲಾಗಿದೆ. ಅಲ್ಲದೆ, ಚರಂಡಿಗೆ ಸ್ಲಾಬ್ ಹಾಕದೆ ಬಿಟ್ಟಿರುವುದರಿಂದ ಮಹಿಳೆಯೊಬ್ಬರು ಬಿದ್ದು ಗಾಯಗೊಂಡ ಘಟನೆ ಕೂಡಾ ನಡೆದಿದೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಅವರು ಸಾರ್ವಜನಿಕರ ಮನವಿ ಸ್ವೀಕರಿಸಿ, “15 ದಿನಗಳೊಳಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸೂಕ್ತವಾಗಿ ಸ್ಪಂದಿಸಿ ಮಾಹಿತಿಯನ್ನು ನೀಡಬೇಕು. ಇಲ್ಲವಾದರೆ ಸಂಬಂಧಪಟ್ಟವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು” ಎಂದು ಖಚಿತಪಡಿಸಿದರು. ಅವರ ಈ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಪ್ರಾಧಿಕಾರ ಎಂಜಿನಿಯರ್ ಬಿನೋದ್ ಕುಮಾರ್, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಉಪಸ್ಥಿತರಿದ್ದರು.

ಹೋರಾಟ ಸಮಿತಿಯ ಅಧ್ಯಕ್ಷ ಜೋಸೆಫ್ ವಿ.ಎ., ಶಿರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾರ್ತಿಕೇಯನ್, ಉಪಾಧ್ಯಕ್ಷೆ ವಿನೀತಾ, ಮಾಜಿ ಅಧ್ಯಕ್ಷ ಎಂ.ಕೆ. ಪೌಲೋಸ್, ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುಭಾಷ್, ಅಡ್ಡಹೊಳೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ವಿಜಯನ್, ಗ್ರಾಮ ಪಂಚಾಯಿತಿ ಸದಸ್ಯ ಸನ್ನಿ ಜಾರ್ಜ್, ಸಾಮಾಜಿಕ ಹೋರಾಟಗಾರ ಕಿಶೋರ್ ಶಿರಾಡಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಆಶಾ ಲಕ್ಷ್ಮಣ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಹಾಗೂ ಶಿರಾಡಿ ಮತ್ತು ಶಿರಿಬಾಗಿಲು ಗ್ರಾಮದ ಜನರು ಈ ಹೋರಾಟದಲ್ಲಿ ಭಾಗಿಯಾಗಿದ್ದರು.
ಸಂತೋಷ್ ಅಡ್ಡಹೊಳೆ ಮತ್ತು ರೇಖಾ ಕಾರ್ಯಕ್ರಮ ನಿರೂಪಿಸಿದರು.




