

ಕಡಬ ತಾಲೂಕು ಕೊಣಾಜೆ ಗ್ರಾಮದ ಮಾಲ ಎಂಬಲ್ಲಿ 2 ½ ವರ್ಷದ ರುದ್ರ ಪ್ರತಾಪ್ ಸಿಂಗ್ ಎಂಬ ಮಗು ಮೃತಪಟ್ಟಿದ್ದು, ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಗುವಿನ ತಾಯಿ ದಿವ್ಯಾಂಶಿ ಸಿಂಗ್ ಉತ್ತರ ಪ್ರದೇಶ ಮೂಲದವರಾಗಿದ್ದು, ತಮ್ಮ ಪತಿ ರಾಜಾ ಸಿಂಗ್ ಅವರೊಂದಿಗೆ ಲಿಂಡೋರಾಜ್ ಎಂಬವರ ತೋಟದಲ್ಲಿ ಕೃಷಿ ಕಾರ್ಯ ನಿರ್ವಹಿಸುತ್ತಿದ್ದರು. ಮಾ.25ರಂದು ಬೆಳಗ್ಗೆ 11:00 ಗಂಟೆಗೆ ಮಗುವಿಗೆ ಊಟ ನೀಡಿ ಮಲಗಿಸಿತ್ತು. ಮಧ್ಯಾಹ್ನ 1:00 ಗಂಟೆಗೆ ಮಗು ಎಚ್ಚರವಾಗದೆ ಇರುವುದನ್ನು ಗಮನಿಸಿ, ತಕ್ಷಣವೇ ತೋಟದ ಮಾಲಕ ಲಿಂಡೋರಾಜ್ ಅವರಿಗೆ ಮಾಹಿತಿ ನೀಡಿದರು.

ಲಿಂಡೋರಾಜ್ ಅವರ ನೆರವಿನಿಂದ ಮಗುವನ್ನು ಕಡಬ ಜೆ.ಎಂ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಬಳಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಗು ಸಾವನ್ನಪ್ಪಿರುವುದಾಗಿ ವೈದ್ಯರ ತಿಳಿಸಿರುತ್ತಾರೆ.
ಮಗು ಆಹಾರ ಸಿಕ್ಕಿಕೊಂಡು ಅಥವಾ ಬೇರೆ ಯಾವುದೇ ಖಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





