

ನೆಲ್ಯಾಡಿ: ಪಡುಬೆಟ್ಟು ಶಾಲೆಯಲ್ಲಿ 2024-25ನೇ ಸಾಲಿನ ದ್ವಿತೀಯ ಸಮುದಾಯದತ್ತ ಕಾರ್ಯಕ್ರಮ ನಡೆಯಿತು. ಪೋಷಕರು ಮಕ್ಕಳ ಪ್ರಗತಿ ಪರಿಶೀಲನೆ ಮಾಡಿದರು. ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಹೇಮಾವತಿ ಅವರು ಮಾರ್ಗದರ್ಶಕಿ ಶಿಕ್ಷಕಿಯಾಗಿ ಆಗಮಿಸಿ ಪೋಷಕರಿಗೆ ಸಲಹೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ 2025-26ನೇ ಸಾಲಿನಲ್ಲಿ ಆರಂಭಗೊಳ್ಳುವ ಎಲ್ ಕೆ ಜಿ ತರಗತಿಯನ್ನು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು.

ಪಡುಬೆಟ್ಟು ಶಾಲೆಯಲ್ಲಿ ಎರಡು ಬಾರಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ ಶಿವಪ್ರಸಾದ್ ಬೀದಿಮಜಲು ಇವರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ.ಎಂ. ಅವರು ಸನ್ಮಾನ ಪತ್ರ ವಾಚಿಸಿದರು. ಮುಖ್ಯಶಿಕ್ಷಕಿ ಜೆಸ್ಸಿ ಕೆ.ಎ. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಪೋಷಕರಿಗೆ ಶಾಲೆಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.


ವೇದಿಕೆಯಲ್ಲಿ ನೆಲ್ಯಾಡಿ ಗ್ರಾ.ಪಂ. ಸದಸ್ಯರಾದ ಜಯಲಕ್ಷ್ಮಿ ಶಿವಪ್ರಸಾದ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವಿಚಂದ್ರ ಪಡುಬೆಟ್ಟು, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಉಮೇಶ್ ಶಾಂತಿಮಾರು, ಉಪಾಧ್ಯಕ್ಷರಾದ ರಫೀಕ್ ಉಳಿತೊಟ್ಟು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಮೆಲಿಷ, ಕನಿಷ್ಕ, ಕೀರ್ತನಾ, ಐಶ್ವರ್ಯ, ಅನುಜ್ಞಾ ಪ್ರಾರ್ಥಿಸಿದರು. ಸಹಶಿಕ್ಷಕಿ ಸಜಿನ ಕೆ.ಎ. ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಕಮಲಾಕ್ಷಿ ಕೆ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಮಮತಾ ಸಿ.ಹೆಚ್. ವಂದಿಸಿದರು. ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕ ವೃಂದ, ವಿದ್ಯಾರ್ಥಿ ವೃಂದ, ಶಿಕ್ಷಕ ವೃಂದ ಸಂಪೂರ್ಣ ಸಹಕಾರ ನೀಡಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.









