

ನೆಲ್ಯಾಡಿ: ಗೋಳಿತಟ್ಟು ಪ್ರಾಥಮಿಕ ಶಾಲೆಯಲ್ಲಿ ಭಾರತದ ಸಂವಿಧಾನ ಶಿಲ್ಪಿಯಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ 134ನೇ ಜನ್ಮದಿನವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗೋಪಾಲ ಗೌಡ, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ವೆಂಕಪ್ಪ ಗೌಡ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಹಾರಿಫ್, ಶತಮಾನೋತ್ಸವ ಸಮಿತಿಯ ಸದಸ್ಯರಾದ ನಾಸಿರ್ ಸಮರಗುಂಡಿ, ಸುಂದರ ಶೆಟ್ಟಿ ಪುರ, ಶೇಖರ ಗೌಡ ಅನಿಲಭಾಗ್ ಹಾಗೂ ಶಾಲಾ ಮುಖ್ಯಶಿಕ್ಷಕಿ ಜಯಂತಿ.ಬಿ.ಎಂ ಸೇರಿದಂತೆ ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ವಿಧ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಗೂ ಭಾವಗೀತೆ ಹಾಡಿ, ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಲಾಯಿತು. ಪ್ರಭಾವಿ ವ್ಯಕ್ತಿತ್ವವಿದ್ದ ಡಾ.ಅಂಬೇಡ್ಕರ್ ಅವರ ಸಮಾಜಮುಖಿ ಚಿಂತನೆ, ಶೋಷಿತ ವರ್ಗದ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟ ಮತ್ತು ಭಾರತೀಯ ಸಂವಿಧಾನದ ಆಕಾರ ನೀಡಿದ ಮಹತ್ತರ ಪಾತ್ರದ ಬಗ್ಗೆ ಉಪನ್ಯಾಸ ನೀಡಲಾಯಿತು.










