


ಬೆಳ್ತಂಗಡಿ: ಕಳೆದ ಸಿಇಟಿ ಪರೀಕ್ಷೆಯಲ್ಲಿ ಕೆಲ ಅಧಿಕಾರಿಗಳು ಅಥವಾ ಸಿಬ್ಬಂದಿ ಪವಿತ್ರವಾದ ಜನಿವಾರವನ್ನು ಕತ್ತರಿಸಿ, ದೇಹದಿಂದ ತೆಗೆಸಿದ ಘಟನೆಗೆ ಬ್ರಾಹ್ಮಣ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸರ್ಕಾರದಿಂದ ಯಾವುದೇ ಸ್ಪಷ್ಟ ಆದೇಶವಿಲ್ಲದಿದ್ದರೂ ಈ ರೀತಿಯ ಅವಿವೇಕಿ ಕ್ರಮವನ್ನು ಬೆಳ್ತಂಗಡಿ ಬ್ರಾಹ್ಮಣ ಮಹಾಸಭಾ ಮತ್ತು ತಾಲ್ಲೂಕಿನ ವಿವಿಧ ಬ್ರಾಹ್ಮಣ ಸಂಘಗಳ ಪದಾಧಿಕಾರಿಗಳು ಖಂಡಿಸಿ, ಸಿಎಂ ಅವರಿಗೆ ಬುಧವಾರ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದರು.

ಈ ಸಂದರ್ಭ ಸಂಘಟನೆಯ ಪ್ರತಿನಿಧಿಗಳು “ಇಂತಹ ಹೇಯ ಕೃತ್ಯಗಳು ಸಮಾಜದಲ್ಲಿ ವಿಭಜನೆಯ ಬೀಜ ಬಿತ್ತುವಂತಹವು. ಶತಮಾನಗಳಿಂದ ಅಧ್ಯಾತ್ಮ, ವಿದ್ಯಾ, ಸಂಸ್ಕೃತಿ ರಕ್ಷಿಸುತ್ತಾ ಬಂದಿರುವ ಬ್ರಾಹ್ಮಣ ಸಮುದಾಯದ ಸಾಂಸ್ಕೃತಿಕ ಗುರುತ್ವವನ್ನು ಧೂಳಿಗೆ ದೂಡುವ ಪ್ರಯತ್ನಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪನಯನ ಸಂಸ್ಕಾರದಲ್ಲಿ ಧರಿಸುವ ಜನಿವಾರವು ಕೇವಲ ನೂಲು ಅಲ್ಲ, ಅದು ವೇದಾಧ್ಯಯನಕ್ಕೆ ಅರ್ಹತೆಯ ಸಂಕೇತವಾಗಿದ್ದು, ಬ್ರಾಹ್ಮಣ ಸಮುದಾಯದ ಆತ್ಮಸಾಕ್ಷಾತ್ಕಾರದ ಪ್ರತಿಕವಾಗಿದೆ. ಈ ರೀತಿಯ ಅವಮಾನಗಳು ನಮ್ಮ ಸಂಸ್ಕೃತಿಯ ಮೂಲಧರ್ಮವನ್ನು ಸವಾಲು ಹಾಕುವ ಪ್ರಯತ್ನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಘಟನೆಯಿಂದ ನೊಂದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳ ಭವಿಷ್ಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂಬ ಒತ್ತಾಯವೂ ಮನವಿಯಲ್ಲಿ ವ್ಯಕ್ತಪಡಿಸಲಾಯಿತು.
ಈ ಸಂದರ್ಭ ಶರತ್ ಕೃಷ್ಣ ಪಡ್ವೆಟ್ನಾಯ, ಬಿ.ಕೆ. ಧನಂಜಯ ರಾವ್, ರಾಘವೇಂದ್ರ ಬೈಪಡಿತ್ತಾಯ, ತ್ರಿವಿಕ್ರಮ ಹೆಬ್ಬಾರ್, ವಿಶ್ವನಾಥ ಹೊಳ್ಳ, ಶಿವಾನಂದ ರಾವ್, ವಿಷ್ಣು ಭಟ್, ಮಹೇಶ್ ಭಟ್ ಹಾಗೂ ಶ್ರೀನಿವಾಸ್ ಧರ್ಮಸ್ಥಳ ಉಪಸ್ಥಿತರಿದ್ದರು.










