

ನೆಲ್ಯಾಡಿ: ರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ಶುಕ್ರವಾರ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಹಾಗೂ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಡೆಂಗ್ಯೂ ಜಾಗೃತಿ ಮಾಹಿತಿ ಹಾಗೂ ಬಡ ಕುಟುಂಬಗಳಿಗೆ ಉಚಿತ ಸೊಳ್ಳೆ ಪರದೆ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ, ನೆಲ್ಯಾಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಲಾಂ ಬಿಲಾಲ್ ಅವರು ಸೊಳ್ಳೆ ಪರದೆಗಳನ್ನು ವಿತರಿಸಿ “ಡೆಂಗ್ಯೂ ಕಾಯಿಲೆ ಸೊಳ್ಳೆಗಳಿಂದ ಹರಡುವ ವೈರಲ್ ಜ್ವರವಾಗಿದೆ. ಮನೆಯ ಒಳಗೆ ಮತ್ತು ಹೊರಗೆ ಶುದ್ಧತೆಯನ್ನು ಕಾಪಾಡುವುದು ಮುಖ್ಯ. ಸರ್ಕಾರದಿಂದ ಉಚಿತವಾಗಿ ನೀಡಿರುವ ಸೊಳ್ಳೆ ಪರದೆಯನ್ನು ಸರಿಯಾಗಿ ಉಪಯೋಗಿಸಿ ಆರೋಗ್ಯವನ್ನು ಕಾಪಾಡುವಂತೆ” ತಿಳಿಹೇಳಿದರು
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರಾ ಅವರು ಮಾತನಾಡಿ, “ಡೆಂಗ್ಯೂ ವೈರಸ್ ನ್ನು ‘ಎಡಿಸ್ ಈಜಿಪ್ಟಿ’ ಎಂಬ ಒಂದು ನಿರ್ದಿಷ್ಟ ವಿಧದ ಸೊಳ್ಳೆ ಹರಡಿಸುತ್ತದೆ. ಈ ಸೊಳ್ಳೆಗಳು ಮುಖ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಸಮಯಗಳಲ್ಲಿ ಕಚ್ಚುತ್ತವೆ. ಡೆಂಗ್ಯೂ ಜ್ವರವು ಅಧಿಕ ಜ್ವರ, ತಲೆ ನೋವು, ಕಣ್ಣಿನ ಹಿಂದೆ ನೋವು, ಅತಿಸಾರ, ದಪ್ಪ ರಕ್ತ ಅಥವಾ ಪ್ಲೇಟ್ಲೆಟ್ ಕುಸಿತದಂತಹ ಗಂಭೀರ ಪರಿಣಾಮಗಳನ್ನುಂಟುಮಾಡಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡದೆ ಹೋದರೆ ಇದು ಜೀವಭಯದ ಸ್ಥಿತಿಯತ್ತ ಕರೆದೊಯ್ಯಬಹುದು. ಆದ್ದರಿಂದ ಮುನ್ನೆಚ್ಚರಿಕೆ ಹಾಗೂ ಸಮಯಕ್ಕೆ ಸರಿಯಾದ ವೈದ್ಯಕೀಯ ಗಮನ ಅಗತ್ಯ” ಎಂದು ವಿವರಿಸಿದರು.
ವೇದಿಕೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು, ನೆಲ್ಯಾಡಿಯ ನೋಟರಿ ವಕೀಲ ಇಸ್ಮಾಯಿಲ್ ನೆಲ್ಯಾಡಿ, ಹಿರಿಯ ಸುರಕ್ಷಾ ಅಧಿಕಾರಿ ಅನ್ನಮ್ಮ ಕೆ.ಸಿ, ಕಿರಿಯ ಸುರಕ್ಷಾ ಅಧಿಕಾರಿ ಸವಿತಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸುಮಾರು 110 ಬಡ ಕುಟುಂಬಗಳಿಗೆ ಉಚಿತ ಸೊಳ್ಳೆ ಪರದೆಗಳು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಹಿರಿಯ ಸುರಕ್ಷಾ ಅಧಿಕಾರಿ ಅನ್ನಮ್ಮ ಕೆ.ಸಿ ಸ್ವಾಗತಿಸಿ, ವಂದಿಸಿದರು.













