

ಚಿಕ್ಕಬಳ್ಳಾಪುರ: ಪ್ರೀತಿಗೆ ಜಾತಿ, ಧರ್ಮದ ಗಡಿ ಇಲ್ಲ ಎಂಬಂತೆಯೇ ಇಲ್ಲೊಂದು ಜೋಡಿ ಜಾತಿ ಧರ್ಮಗಳ ಎಲ್ಲೆ ಮೀರಿ ಪ್ರೇಮ ವಿವಾಹವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಯಾಪಲಹಳ್ಳಿಯ ಹರೀಶ್ ಬಾಬು ಮತ್ತು ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ನಜ್ಮಾ ಎಂಬ ಇಬ್ಬರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ, ಸ್ನೇಹದಿಂದ ಪ್ರೀತಿ, ಪ್ರೀತಿಯಿಂದ ವಿವಾಹದವರೆಗೆ ಮುಂದಾಗಿದ್ದಾರೆ. ಆದರೆ ಧರ್ಮ ಭಿನ್ನತೆಯಿಂದಾಗಿ ಕುಟುಂಬಗಳಿಂದ ಪ್ರಬಲ ವಿರೋಧ ಎದುರಾಗಿದೆ.
ಯುವತಿಯ ಕುಟುಂಬ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿ, ನಜ್ಮಾಗೆ ಕೆಲಸಕ್ಕೂ ಬಿಡದೆ ಮನೆಯಲ್ಲಿ ಉಳಿಸಿಕೊಂಡಿದ್ದರು. ಆದರೆ ತನ್ನ ನಿರ್ಧಾರದಲ್ಲಿ ಬದ್ಧವಿದ್ದ ನಜ್ಮಾ, ಹರೀಶ್ ಬಾಬು ಜೊತೆ ಮನೆಯಿಂದ ಹೊರಬಂದು ವಿವಾಹವಾಗಿದ್ದಾರೆ.
ನಂತರ ರಕ್ಷಣೆ ಕೋರಿ ನವಜೋಡಿ ಚಿಕ್ಕಬಳ್ಳಾಪುರ ಎಸ್‌ಪಿ ಕುಶಲ್ ಚೌಕ್ಸಿ ಅವರ ಮೊರೆ ಹೋಗಿದ್ದು, ಪ್ರಕರಣದ ಸೂಕ್ಷ್ಮತೆ ಅರಿತ ಎಸ್‌ಪಿ ಅವರು ಇಬ್ಬರನ್ನು ಗ್ರಾಮಾಂತರ ಠಾಣೆಗೆ ಕಳುಹಿಸಿ, ಯುವತಿಯ ಪೋಷಕರೊಂದಿಗೆ ಸಮಾಲೋಚನೆ ನಡೆಸುವಂತೆ ತಿಳಿಸಿದರು.
ಪೋಷಕರು ಯುವತಿಯನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ನಜ್ಮಾ ತನ್ನ ನಿರ್ಧಾರದಲ್ಲಿ ಬದ್ಧವಿದ್ದಳು. ಕೊನೆಗೆ ಪೊಲೀಸರು ಯುವತಿ ಪೋಷಕರಿಂದ ಮುಚ್ಚಳಿಕೆ ಪಡೆದಿದ್ದಾರೆ ಹಾಗೂ ನವಜೋಡಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.













