ನೆಲ್ಯಾಡಿ: ಕೌಕ್ರಾಡಿ ಗ್ರಾಮದಲ್ಲಿ ಕೃಷಿ ತೋಟಗಳಿಗೆ ಆನೆ ದಾಳಿ: ಕೃಷಿಕರಲ್ಲಿ ಆತಂಕ

ಶೇರ್ ಮಾಡಿ

ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಮಂಡೆಗುಂಡಿ, ಬೇರಿಕೆ, ಕಂಚಿನಡ್ಕ, ಪಿಲತ್ತಿಂಜ ಮೊದಲಾದ ಭಾಗಗಳಲ್ಲಿ ನಿರಂತರವಾಗಿ ಕೃಷಿಗೆ ತೋಟಗಳಿಗೆ ಆನೆ ದಾಳಿ ನಡೆಯುತ್ತಿದ್ದು, ಇದರಿಂದಾಗಿ ಅಡಿಕೆ, ಬಾಳೆ ಹಾಗೂ ತೆಂಗು ತೋಟಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳ್ಳುತ್ತಿದ್ದು, ಕೃಷಿಕರಲ್ಲಿ ಭಯಭೀತಿಯ ವಾತಾವರಣ ಉಂಟಾಗಿದೆ.

ಭಾನುವಾರ ಮಧ್ಯರಾತ್ರಿ ಮಂಡೆಗುಂಡಿ ನಿವಾಸಿ ಬಾಲ ಮುರಳಿಕೃಷ್ಣ ಅವರ ಕೃಷಿ ತೋಟಕ್ಕೆ ನುಗ್ಗಿದ ಆನೆ ಬಾಳೆ ಗಿಡಗಳನ್ನು ಜಖಂಗೊಳಿಸಿದ್ದು ಮಾತ್ರವಲ್ಲದೇ, ನೀರಿನ ಪೈಪ್ ಲೈನ್ ಗಳನ್ನೂ ಹಾನಿಗೊಳಿಸಿ ಅಪಾರ ಆರ್ಥಿಕ ನಷ್ಟವನ್ನುಂಟುಮಾಡಿವೆ.

ಅಲ್ಲದೆ ನಾರಾಯಣ ಬೇರಿಕೆ, ಮಹೇಶ್ ಭಟ್ ಕಂಚಿನಡ್ಕ, ರಾಮ ಎಡಪಡಿತ್ತಾಯ ಮುಂತಾದ ಕೃಷಿಕರ ತೋಟಗಳತ್ತವೂ ಆನೆಗಳ ಅಟ್ಟಹಾಸ ಮುಂದುವರೆದಿದೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ರಾತ್ರಿ ವೇಳೆಗೆ ಆನೆಗಳ ದಾಳಿ ಸಾಮಾನ್ಯವಾಗಿರುವುದರಿಂದ, ಕೃಷಿಕರಲ್ಲಿ ಭಯದ ವಾತಾವರಣದೊಂದಿಗೆ ಬೆಳೆದ ಬಾಳೆ, ತೆಂಗು ಹಾಗೂ ಅಡಿಕೆ ಕೃಷಿಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಕೃಷಿಕರ ಹೇಳಿಕೆಯಂತೆ, ಅರಣ್ಯ ಇಲಾಖೆ ನಿರ್ಮಿಸಿದ ಆನೆ ತಡೆಕಂದಕಗಳು ಕೆಲವೆಡೆ ಹಾಳಾಗಿರುವ ಕಾರಣದಿಂದಾಗಿ ಆನೆಗಳು ತೋಟಗಳತ್ತ ಸುಲಭವಾಗಿ ನುಗ್ಗುತ್ತಿವೆ. ಆನೆ ಕಂದಕಗಳನ್ನು ಶೀಘ್ರವಾಗಿ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಕೃಷಿಗೆ ನಷ್ಟದೊಂದಿಗೆ ಜೀವ ಭಯವೂ ಕಾಡುತ್ತದೆ ಎಂದು ಸ್ಥಳೀಯ ಕೃಷಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

  •  

Leave a Reply

error: Content is protected !!