


ಬಂಟ್ವಾಳ: ಯುವತಿ ಮದುವೆಗೆ ನಿರಾಕರಿಸಿದ್ದರಿಂದ ನೊಂದ ಯುವಕನು ಮೊದಲಿಗೆ ಆಕೆಗೆ ಚೂರಿ ಇರಿಸಿ, ನಂತರ ಆಕೆಯ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಫರಂಗಿಪೇಟೆ-ಮಾರಿಪಳ್ಳ ಸಮೀಪದ ಸುಜೀರ್-ಮಲ್ಲಿ ಎಂಬಲ್ಲಿ ಸೋಮವಾರ ಸಂಭವಿಸಿದೆ.
ಮೃತ ಯುವಕನನ್ನು ಕೊಡ್ಮಣ್ ನಿವಾಸಿ ಸುಧೀರ್ (30) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಯುವತಿಯನ್ನು ಫರಂಗಿಪೇಟೆ ನಿವಾಸಿ ದಿವ್ಯಾ ಯಾನೆ ದೀಕ್ಷಿತಾ(26) ಎಂದು ಗುರುತಿಸಲಾಗಿದೆ.
ದಿವ್ಯಾ ಮತ್ತು ಸುಧೀರ್ ನಡುವೆ ಮನಸ್ತಾಪ ಉಂಟಾಗಿ ದಿವ್ಯಾ ಮದುವೆಗೆ ನಿರಾಕರಿಸಿದ್ದಾಳೆ. ಇದರಿಂದ ನೊಂದ ಸುಧೀರ್, ಸೋಮವಾರ ಬೆಳಿಗ್ಗೆ ದಿವ್ಯಾಳ ಸಮೀಪ ಬಂದು ಮದುವೆಗೆ ಒತ್ತಾಯಿಸಿದ್ದಾನೆ. ಮಾತಿಗೆ ಮಾತು ಬೆಳೆದು ಗಲಾಟೆ ಉಂಟಾಗಿದಾಗ, ಸುಧೀರ್ ತನ್ನ ಜೊತೆಯಲ್ಲಿದ್ದ ಚೂರಿಯಿಂದ ದಿವ್ಯಾಳಿಗೆ ಇರಿದಿದ್ದಾನೆ.
ದಿವ್ಯಾ ಗಾಯಗೊಂಡು ಪಾರಾಗುತ್ತಿದ್ದ ವೇಳೆ ಬಿದ್ದಿದ್ದು, ಈ ದೃಶ್ಯ ನೋಡಿ ಆಕೆ ಮೃತಪಟ್ಟಿರಬಹುದೆಂದು ಭಾವಿಸಿದ ಸುಧೀರ್, ದಿವ್ಯಾಳ ಬಾಡಿಗೆ ಮನೆಗೆ ತೆರಳಿ, ಅಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡ ದಿವ್ಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.









