

ಉಪ್ಪಿನಂಗಡಿ: ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ಕೌಟುಂಬಿಕ ಕಲಹ ಭೀಕರ ತಿರುವು ಪಡೆದು, ಪತಿ ಪತ್ನಿಯನ್ನು ಚಾಕುವಿನಿಂದ ತಿವಿದು ಹತ್ಯೆ ಮಾಡಿದ ದಾರುಣ ಘಟನೆ ಜುಲೈ 17 ರಂದು ಬೆಳಿಗ್ಗೆ ನಡೆದಿದೆ.
ಮೃತ ಮಹಿಳೆಯನ್ನು ಝೀನತ್ (40) ಎಂದು ಗುರುತಿಸಲಾಗಿದೆ. ಆರೋಪಿ ರಫೀಕ್ (45) ಈಕೆಯ ಪತಿಯೇ ಆಗಿದ್ದು, ಸುಮಾರು 18 ವರ್ಷಗಳ ಹಿಂದೆ ಈ ದಂಪತಿ ವಿವಾಹವಾಗಿದ್ದು, ಹತ್ತನೇ ಮತ್ತು ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ತಿಂಗಳಿಂದ ದಂಪತಿಯ ನಡುವೆ ವೈಷಮ್ಯ ಹೆಚ್ಚಾಗಿ, ಅದೇ ಕಾರಣದಿಂದ ಮನೆಯೊಳಗೆ ಅಶಾಂತಿ ಮನೆಮಾಡಿದ್ದರೆಂದು ತಿಳಿದುಬಂದಿದೆ.
ಘಟನೆಯಂದು ಮುಂಜಾನೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಕೋಪಕ್ಕೆ ರಫೀಕ್ ತನ್ನ ಪತ್ನಿಗೆ ಬರ್ಬರವಾಗಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯಿಂದ ಗಂಭೀರ ಗಾಯಗೊಂಡ ಝೀನತ್ ಅವರನ್ನು ತಕ್ಷಣ ಸ್ಥಳೀಯರು ಹಾಗೂ ಕುಟುಂಬದವರು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ.
ಘಟನಾ ಸ್ಥಳಕ್ಕೆ ಅಡಿಷನಲ್ ಎಸ್ಪಿ ರಾಜೇಂದ್ರ, , ಡಿವೈಎಸ್ಪಿ ಅರುಣ್ ನಾಗೇಗೌಡ, ವೃತ್ತ ನಿರೀಕ್ಷಕ ರವಿ ಬಿ ಎಸ್ ಹಾಗೂ ಉಪ ನಿರೀಕ್ಷಕ ಅವಿನಾಶ್ ಅವರು ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ರಫೀಕ್ ನನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ.










