ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಎನ್ ಎಸ್ ಎಸ್ ಚಟುವಟಿಕೆಗಳ ಉದ್ಘಾಟನೆ

ಶೇರ್ ಮಾಡಿ

ನೆಲ್ಯಾಡಿ: ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆ, ಸೇವಾ ಮನೋಭಾವನೆ ಹಾಗೂ ಶ್ರಮದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆ 2025-26ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಮಂಗಳವಾರದಂದು ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಫಾ.ಅನೀಶ್ ಪಾರಶೆರಿಲ್, “ವಿದ್ಯಾರ್ಥಿಗಳನ್ನು ವಿವಿಧ ಕಾರ್ಯಚಟುವಟಿಕೆಗಳ ಮೂಲಕ ಪ್ರೇರೇಪಿಸಿ, ಸಮಾಜಕ್ಕೆ ಒಳ್ಳೆಯ ನಾಗರಿಕರನ್ನಾಗಿ ರೂಪಿಸುವ ಕೆಲಸ ಎನ್ ಎಸ್ ಎಸ್ ಮಾಡುತ್ತಿದೆ. ನಾವು ಒಳ್ಳೆಯವರಾದರೆ ಸಾಕಾಗದು, ನಮ್ಮ ಸುತ್ತಲಿರುವವರನ್ನೂ ಒಳ್ಳೆಯವರನ್ನಾಗಿ ಮಾಡಬೇಕಾದ ಜವಾಬ್ದಾರಿ ನಮ್ಮದು. ಸಮಾಜಕ್ಕೆ ಏನಾದರೂ ಕೊಡುವ ನಿಷ್ಠೆ ನಮ್ಮೊಳಗಿರಬೇಕು” ಎಂದು ಹೇಳಿದರು.

ಅಭ್ಯಾಗತರಾಗಿ ಪಾಲ್ಗೊಂಡಿದ್ದ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ತಿಲಕಾಕ್ಷ ಅವರು, “ಒಬ್ಬ ವ್ಯಕ್ತಿಯು ಹೊಗಳಲು, ತೆಗೆಯಲು ಯೋಗ್ಯನಾಗಿದಾಗ ಮಾತ್ರ ತನ್ನ ಮೌಲ್ಯವನ್ನು ಉಳಿಸಿಕೊಳ್ಳುತ್ತಾನೆ. ಎನ್ ಎಸ್ ಎಸ್ ಕೇವಲ ಕೆಲಸ ಮಾಡುವ ವೇದಿಕೆಯಲ್ಲ, ಇದು ಸಾಮಾಜಿಕ ಜವಾಬ್ದಾರಿಯ ಬೆಳವಣಿಗೆಯ ಪಾಠಶಾಲೆಯಾಗಿದೆ. ವಿದ್ಯಾರ್ಥಿಗಳು ತಾಳ್ಮೆ, ಸಹನೆ, ಜವಾಬ್ದಾರಿ ಇತ್ಯಾದಿ ಮೌಲ್ಯಗಳನ್ನು ಈ ವೇದಿಕೆಯಿಂದ ಅರಿಯಬಹುದು. ನಾವು ಸರ್ಕಾರವನ್ನು ದೂರುವ ಬದಲು ನಮ್ಮಿಂದ ಸಾಧ್ಯವಿರುವ ನಂಬಿಕಾರ್ಹ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು. ಜ್ಞಾನ ಹಂಚಿಕೊಳ್ಳುವ ಮೂಲಕ ನಮಗೂ ಬೆಳವಣಿಗೆಯ ಅವಕಾಶ ಸಿಗುತ್ತದೆ, ಇತರರು ಕೂಡ ಬೆಳೆಯಲು ಸಾಧ್ಯವಾಗುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ಮಾತನಾಡಿ ಎನ್ ಎಸ್ ಎಸ್ ಮೂಲಕ ವಿದ್ಯಾರ್ಥಿಗಳಲ್ಲಿನ ಸಾಮಾಜಿಕ ಜವಾಬ್ದಾರಿ, ಶ್ರಮಸಾಧನೆ ಹಾಗೂ ಕೌಶಲ್ಯಗಳನ್ನು ಅರಗಿಸಿಕೊಂಡರೆ, ಮುಂದಿನ ಪೀಳಿಗೆ ಸಮಾಜದ ನೈತಿಕ ಶಕ್ತಿಯಾಗಿ ರೂಪುಗೊಳ್ಳುವುದು ಖಚಿತ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾ.ನೋಮಿಸ್ ಕುರಿಯಾಕೋಸ್ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಘಟಕದ ಅಧಿಕಾರಿ ವಿಶ್ವನಾಥ ಶೆಟ್ಟಿ.ಕೆ., ಕಾರ್ಯಕ್ರಮಗಳ ಸಂಯೋಜಕಿ ಗೀತಾ, ಘಟಕ ನಾಯಕರು ತನುಷ್ ಮತ್ತು ಅನುಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೀತಾ ಸ್ವಾಗತಿಸಿದರು. ವಿಶ್ವನಾಥ ಶೆಟ್ಟಿ.ಕೆ., ಕಾರ್ಯಕ್ರಮ ನಿರೂಪಿಸಿದರು. ಅನುಷಾ ವಂದಿಸಿದರು.

  •  

Leave a Reply

error: Content is protected !!