

ಕೊಕ್ಕಡ: ಬೆಳ್ತಂಗಡಿ, ಕಡಬ ಮತ್ತು ಸುಳ್ಯ ತಾಲೂಕಿನ ಕೃಷಿಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿರುವ ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಕಾಡು ಹಂದಿಗಳಿಂದ ಕಾಡಿನ ಅಂಚು ಪ್ರದೇಶಗಳಲ್ಲಿ ಕೃಷಿಕರು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ಕೇರಳ ಮಾದರಿಯಲ್ಲಿ ಕಾಡು ಹಂದಿಗಳನ್ನು ನಿಯಂತ್ರಣ ಮಾಡಲು ಅನುಮತಿ ನೀಡುವಂತೆ ಅರಣ್ಯ ಸಚಿವರಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮಂಗಳವಾರ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಸಕರು ಮುಂದಿನ ದಿನಗಳಲ್ಲಿ ಈ ತೀವ್ರ ಸಮಸ್ಯೆಗಳ ಬಗ್ಗೆ ಬೆಳ್ತಂಗಡಿ, ಕಡಬ ಹಾಗೂ ಸುಳ್ಯದ ಮುಖಂಡರು, ಜನಪ್ರತಿನಿಧಿಗಳ ಸಭೆ ಕರೆಯಲಾಗುವುದೆಂದು ತಿಳಿಸಿದರು. ಕಾಡುಪ್ರಾಣಿಗಳ ಹಾವಳಿಯಿಂದ ತೊಂದರೆಗೊಳಗಾಗಿರುವ ಕೃಷಿಕರ ಪರವಾಗಿ ಸದಾ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು.
ಸಭಾಭವನ ಅಗತ್ಯ:
ಗ್ರಾಮಸ್ಥರು ಸರಕಾರಿ ಸಭೆ, ಸಮಾರಂಭಗಳಿಗಾಗಿ ಗ್ರಾಮದಲ್ಲಿ ಸಭಾಭವನದ ಕೊರತೆ ಇದೆ ಎಂದು ಪ್ರಸ್ತಾಪಿಸಿದರು. ಅಂಬೇಡ್ಕರ್ ಭವನ ನಿರ್ಮಾಣಕ್ಕೆ 10 ಸೆಂಟ್ಸ್ ಜಾಗ ಕಾದಿರಿಸಿಕೊಂಡಿರುವ ಬಗ್ಗೆ ಶಾಸಕರು ಸ್ಪಂದಿಸಿದರು. ಆದರೆ ಈ ಜಾಗ ಸಾಕಾಗದ ಕಾರಣ ಅರ್ಧ ಎಕರೆ ಜಾಗವನ್ನು ಮೀಸಲಿಡುವಂತೆ ತಹಶಿಲ್ದಾರರಿಗೆ ಸೂಚಿಸಿದರು.
ರಸ್ತೆ ಅಭಿವೃದ್ಧಿ:
ಕಾಯರ್ತಡ್ಕ ರಸ್ತೆಯ ದುಸ್ಥಿತಿಯನ್ನು ಪ್ರಸ್ತಾಪಿಸಿದ ಗ್ರಾಮಸ್ಥರ ಮನವಿಗೆ ಶಾಸಕರು ತಕ್ಷಣ ಸ್ಪಂದಿಸಿ, ಲೋಕೋಪಯೋಗಿ ಇಲಾಖೆ ಮಂಜೂರಿಗೊಳಿಸಿದ 8 ಕೋಟಿ ರೂ. ಅನುದಾನದಲ್ಲಿ 4 ಕೋಟಿ ರೂ. ಈ ರಸ್ತೆಯ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು. ಕಾಮಗಾರಿ ಪ್ರಾರಂಭದ ಹಂತದಲ್ಲಿದ್ದು, ಟೆಂಡರ್ ರಾಜ್ ಕಮಲ್ ಅವರಿಗೆ ಒಪ್ಪಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಶಾಲೆಯ ಸಮಸ್ಯೆ:
ಪದ್ಮನಾಭ ಎಂಬವರು ಪ್ರಸ್ತಾಪಿಸಿದಂತೆ, ಸ್ಥಳೀಯ ಸರ್ಕಾರಿ ಶಾಲೆಯ ಮೇಲ್ಛಾವಣಿ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಮಕ್ಕಳ ಭದ್ರತೆ ಪ್ರಶ್ನೆಗೆ ಒಳಗಾಗುತ್ತಿದೆ. ಜೊತೆಗೆ ಶಾಲೆಯ ಜಾಗಕ್ಕೆ ಸಂಬಂಧಪಟ್ಟ ಪಹಣಿ ಸಮಸ್ಯೆಯೂ ಇದೆ. ಈ ಕುರಿತು ತ್ವರಿತ ಕ್ರಮಕ್ಕೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
309 ಸ.ನಂ. ಅರಣ್ಯ ವಿವಾದ:
ಕಳೆಂಜ ಗ್ರಾಮದ 8 ಸಾವಿರ ಎಕರೆ ಅರಣ್ಯದ ಅಂಚಿನಲ್ಲಿರುವ ಜಾಗದಲ್ಲಿ ಉಂಟಾದ ಖಾಸಗಿ-ಅರಣ್ಯ ಇಲಾಖೆಯ ನಡುವೆ ಉಂಟಾದ ವಿವಾದ ಕುರಿತು ಶಾಸಕರು ವಿವರವಾಗಿ ಮಾತನಾಡಿ, ಮಳೆಗಾಲ ಮುಗಿದ ನಂತರ ಇ ಜಮೀನಿನ ಜಂಟಿ ಸರ್ವೆ ಕಾರ್ಯ ನಡೆಸಲಾಗುವುದು. ಇಲ್ಲಿ ಹೆಚ್ಚುವರಿ ಜಮೀನು ಇದೆ ಎಂಬುದು ಸ್ಪಷ್ಟವಾಗಿದ್ದು ಅಳತೆಕಾರ್ಯ ಪೂರ್ಣಗೊಂಡ ಬಳಿಕ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಾಗುತ್ತದೆ ಎಂದರು.
ಇತರೆ ಸಮಸ್ಯೆಗಳ ಚರ್ಚೆ:
ಅಕ್ರಮ-ಸಕ್ರಮ ಪ್ಲಾಟಿಂಗ್ ಸಮಸ್ಯೆ, ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಕೊರತೆ, ಬಸ್ ಸೇವೆಗಳ ಕೊರತೆ, ಸ್ಮಶಾನದ ವಿಚಾರ, ಸಾರ್ವಜನಿಕ ಮೂಲಭೂತ ಸೌಕರ್ಯಗಳ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರು. ಸ್ಮಶಾನ ಜಾಗಕ್ಕೆ ತಡವಾಗುತ್ತಿರುವ ಕಾಮಗಾರಿಗಳನ್ನು ತ್ವರಿತಗೊಳಿಸಲು ಸರ್ವೆ ಮಾಡಿ ಗಡಿಗುರುತು ನಿರ್ಧರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ತಹಶಿಲ್ದಾರ್ ಪೃಥ್ವಿ ಸಾನಿಕಮ್ ಕೂಡ ಯಾವುದೇ ಕಾನೂನು ಅಡಚಣೆ ಇಲ್ಲವೆಂದು ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.










