

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಡಬ ತಾಲೂಕು ಕಡಬ ವಲಯದ ರೇಂಜಿಲಾಡಿ ಒಕ್ಕೂಟದ ವತಿಯಿಂದ ಪರಿಸರ ಮಾಹಿತಿ ಮತ್ತು ಗಿಡ ವಿತರಣಾ ಕಾರ್ಯಕ್ರಮವು ರೇಂಜಿಲಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕಡಬ ವಲಯ ಮೇಲ್ವಿಚಾರಕರಾದ ವಿಜೇಶ್ ಜೈನ್ ಉದ್ಘಾಟಿಸಿ, ಪರಿಸರದ ಮಹತ್ವ ಹಾಗೂ ಗಿಡಗಳ ಬೆಳವಣಿಗೆ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಅವರು ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಹಾನಿ, ಹಸಿರುಪದ್ಧತಿಯ ಅವಶ್ಯಕತೆ, ಪ್ರತಿ ಮನೆಯಲ್ಲಾದರೂ ಒಂದು ಗಿಡ ನೆಡುವ ಅಗತ್ಯದ ಬಗ್ಗೆ ಸ್ಫೂರ್ತಿದಾಯಕ ಭಾಷಣ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಜಯಾನಂದ, ಉಪಾಧ್ಯಕ್ಷ ಲಿಂಗಪ್ಪ, ಪದಾಧಿಕಾರಿಗಳಾದ ಸವಿತಾ, ಲಲಿತಾ, ಪ್ರಸಾದ್ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಉಷಾ ಉಪಸ್ಥಿತರಿದ್ದರು.
ಒಕ್ಕೂಟದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಭಾಗಿಯಾದ ಎಲ್ಲ ಸದಸ್ಯರಿಗೆ ಗಿಡಗಳನ್ನು ವಿತರಣೆ ಮಾಡಲಾಯಿತು.
ಸೇವಾಪ್ರತಿನಿಧಿ ಸುಗುಣ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಲಲಿತಾ ವಂದಿಸಿದರು.










