ಕೊಕ್ಕಡ: ಅರಸಿನಮಕ್ಕಿ-ಶಿಶಿಲ ಗ್ರಾಮೀಣ ಪ್ರದೇಶದಲ್ಲಿ ಭಾರಿ ಮಳೆಯಿಂದ ಭಾರಿ ಹಾನಿ; ಡ್ಯಾಮ್ ಧ್ವಂಸ, ರಸ್ತೆ ಜರ್ಜರಿತ, ವಿದ್ಯುತ್ ಸೇವೆ ವ್ಯತ್ಯಯ

ಶೇರ್ ಮಾಡಿ

ಕೊಕ್ಕಡ: ಅರಸಿನಮಕ್ಕಿ ಹಾಗೂ ಶಿಶಿಲ ಭಾಗದಲ್ಲಿ ಆ.5ರಂದು ಎಡೆ ಬಿಡದೆ ಸುರಿದ ಭಾರಿ ಮಳೆಯ ಪರಿಣಾಮವಾಗಿ ಗ್ರಾಮೀಣ ಮೂಲಸೌಕರ್ಯಗಳು ಧ್ವಂಸವಾಗಿದ್ದು, ಹಲವೆಡೆ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ. ಕಪಿಲಾ ನದಿ ತುಂಬಿ ಹರಿದ ಪರಿಣಾಮ ಅರಸಿನಮಕ್ಕಿಯ ವೆಂಟೆಡ್ ಡ್ಯಾಂ ಎರಡು ಬದಿಗಳೂ ಸಂಪೂರ್ಣ ಹಾನಿಗೊಳಗಾಗಿದೆ. ಚರಂಡಿ ತಡೆಗಾಗಿ ಹಾಕಿದ್ದ 100ಲೋಡ್‌ನಷ್ಟು ಚರಲ್ ಕೊಚ್ಚಿ ಹೋಗಿದೆ. ಡ್ಯಾಂ ಆಧಾರದ ಕಂಬಕ್ಕೂ ತೀವ್ರ ಹಾನಿಯಾಗಿದ್ದು, ಸದ್ಯಕ್ಕೆ ಅಂದಾಜು 1.50 ರಿಂದ 2 ಲಕ್ಷ ರೂಪಾಯಿಯಷ್ಟು ಹಾನಿಯಾಗಿದೆ. ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್ ಅವರು ಈ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿ, ತಕ್ಷಣವೇ ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ನೆರವು ಬೇಕೆಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಭಾರೀ ಮಳೆಯಿಂದ ಅನೇಕ ಗ್ರಾಮೀಣ ರಸ್ತೆಗಳು ಜರ್ಜರಿತಗೊಂಡಿದ್ದು, ಜನರಿಗೆ ಓಡಾಟಕ್ಕೂ ತೊಂದರೆ ಉಂಟಾಗಿದೆ. ಶಿಶಿಲ – ವೈಕುಂಠಪುರ ಗಿರಿಜನ ಕಾಲೋನಿ ರಸ್ತೆ 600 ಮೀ, ಬೈರಕಟ್ಟೆ – ಪೇರಿಕೆ ರಸ್ತೆ 3 ಕಿ.ಮೀ, ಶಿಶಿಲೇಶ್ವರ ದೇವಸ್ಥಾನ- ಗುತ್ತು ರಸ್ತೆ 2.5 ಕಿ.ಮೀ, ಗುತ್ತು – ದೇವಸ ರಸ್ತೆ 1 ಕಿ.ಮೀ, ವೈಕುಂಠಪುರ – ಗುಡ್ಡತೋಟ ರಸ್ತೆ 2 ಕಿ.ಮೀ ಹಾನಿಗೊಳಗಾದ ರಸ್ತೆಗಳಾಗಿದ್ದು, ಇದಕ್ಕೆ ತುರ್ತು ದುರಸ್ತಿ ಕಾರ್ಯಕ್ಕಾಗಿ ಸುಮಾರು ₹5 ಲಕ್ಷ ಅನುದಾನವನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಮಂಜೂರುಗೊಳಿಸುವಂತೆ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ತಾಲೂಕು ಪಂಚಾಯತ್‌ಗೆ ಶಿಶಿಲ ಪಂಚಾಯತ್ ಅಧ್ಯಕ್ಷ ಸುಧೀನ್ ಡಿ ಮನವಿ ಸಲ್ಲಿಸಿದ್ದಾರೆ.

ಮಳೆಯಿಂದ ಉಂಟಾದ ಮತ್ತೊಂದು ಘಟನೆದಲ್ಲಿ ಅರಸಿನಮಕ್ಕಿಯ ಅರಿಕೆಗುಡ್ಡೆ ಸಮೀಪ ಭಾರಿ ಮಳೆಗೆ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಆರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸ್ಥಳಕ್ಕೆ ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆ ಆಗಮಿಸಿ ಮರ ತೆರವುಗೊಳಿಸಿದರೆ, ಮೆಸ್ಕಾಂ ಇಲಾಖೆಯವರು ವಿದ್ಯುತ್ ಕಂಬಗಳನ್ನು ಇನ್ನೂ ಸರಿಪಡಿಸಬೇಕಿದೆ.

ಶಿಬಾಜೆಯ ಬಂಡಿಹೊಳೆ ಬಳಿ ಅರಸಿನಮಕ್ಕಿ-ಶಿಶಿಲ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾಗಿತ್ತು. ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆ, ರಮೇಶ್ ಬೈರಕಟ್ಟೆ ಮತ್ತು ಇತರ ಸದಸ್ಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಿದರು.

ಇನ್ನೊಂದೆಡೆ ಶಿಶಿಲದ ಮುಚ್ಚಿರಡ್ಕದಲ್ಲಿ ಕೃಷ್ಣಪ್ಪ ಗೌಡ ಅವರ ಮನೆಯ ಹಿಂಬದಿಯ ಗುಡ್ಡ ಕುಸಿದಿದ್ದು ಮನೆಗೆ ತಾಗಿಕೊಂಡಂತೆ ಮಣ್ಣಿನ ರಾಶಿ ಬಿದ್ದಿದೆ. ಪಂಚಾಯತ್ ಅಧ್ಯಕ್ಷರು ಹಾಗೂ ಶೌರ್ಯ ವಿಪತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

  •  

Leave a Reply

error: Content is protected !!