

ನೆಲ್ಯಾಡಿ: ಮಾನವೀಯತೆ, ಶ್ರೇಷ್ಠತೆಯ ಚಿಂತನೆ ಹಾಗೂ ರಾಷ್ಟ್ರಪರತೆ ಎಂಬ ಮೂಲ ಅಂಶಗಳನ್ನು ಮೌಲ್ಯಮಾಪನದೊಳಗೆ ತಂದು, ಕಲೆಯೊಂದನ್ನೇ ಬದುಕಿನ ಧರ್ಮವನ್ನಾಗಿ ರೂಪಿಸಿದ ವಿಶ್ವಕವಿ ರವೀಂದ್ರನಾಥ ಠಾಗೋರ್ ಅವರು ಭಾರತಕ್ಕೆ, ಭಾರತೀಯ ಸಮಾಜಕ್ಕೆ, ಮತ್ತು ವಿಶ್ವಮಟ್ಟದ ಮಾನವ ಸಮಾಜಕ್ಕೂ ಅನನ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರು ಕವಿಯಷ್ಟೇ ಅಲ್ಲ, ಕಥೆಗಾರ, ನಾಟಕಕಾರ, ಸಂಗೀತಜ್ಞ, ಚಿಂತಕ, ಶಿಕ್ಷಣತಜ್ಞ, ಚಿತ್ರಕಾರ, ರಾಷ್ಟ್ರೀಯ ಚೇತನೆಯ ಪ್ರೇರಕ ಎಂದೆಲ್ಲವೂ ಗುರುತಿಸಲ್ಪಟ್ಟಿದ್ದಾರೆ ಎಂದು ವಿಜಯ ಕರ್ನಾಟಕ ಪತ್ರಿಕೆ ಜಿಲ್ಲಾ ವರದಿಗಾರ ಸುಧಾಕರ ಸುವರ್ಣ ಹೇಳಿದರು.
ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಗುರುವಾರದಂದು ನಡೆದ ವಿಶ್ವಕವಿ ರವೀಂದ್ರನಾಥ ಠಾಗೋರ್ ರ 84ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳ ಸ್ಥಾನದಿಂದ ಮಾತನಾಡಿದರು
ಬಂಗಾಳಿ ಭಾಷೆಯ ಮೂಲಕ ಭಾರತೀಯ ಆತ್ಮವನ್ನು ಜಗತ್ತಿಗೆ ಪರಿಚಯಿಸಿದ ಠಾಗೋರ್, ಕೇವಲ ಸಾಹಿತ್ಯದ ಚರ್ಚೆಯಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಕ್ರಾಂತಿ ಮೂಡಿಸಿದರು. ಅವರು ಸ್ಥಾಪಿಸಿದ ಶಾಂತಿನಿಕೇತನ ಮತ್ತು ನಂತರದ ವಿಶ್ವಭಾರತಿ ವಿಶ್ವವಿದ್ಯಾಲಯ ಆಧುನಿಕ, ಸೃಜನಾತ್ಮಕ ಶಿಕ್ಷಣದ ಮಾದರಿಯಾಗಿವೆ. ‘ಜನಗಣಮನ’ ಎಂಬ ರಾಷ್ಟ್ರಗೀತೆ ಜನತೆಯ ಹೃದಯದಲ್ಲಿ ತಾಜಾ ರಾಷ್ಟ್ರಭಕ್ತಿಯನ್ನು ಉಕ್ಕಿಸುವ ಗೀತೆಯಾಗಿ ಉಳಿದಿದೆ. ಅವರು ಬಂಗ್ಲಾದೇಶದ ರಾಷ್ಟ್ರಗೀತೆ “ಆಮಾರ ಶೋನಾರ್ ಬಾಂಗ್ಲಾ” ಕೂಡ ರಚಿಸಿದ್ದಾರೆ. ಠಾಗೋರ್ ಗಾಂಧೀಜಿಯವರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡರೂ, ಅವರದೇ ಆದ ದೃಷ್ಟಿಕೋನವನ್ನು ಎತ್ತಿಹಿಡಿದರು. ದೇಶದ ಒಟ್ಟಾರೆ ಹಿತವನ್ನೇ ಎಲ್ಲಕ್ಕೂ ಮೇಲಿಟ್ಟ ಅವರನ್ನು, ಇಂದು ‘ವಿಶ್ವಮಾನವ’ ಎಂದು ವರ್ಣಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂತ ಚಾರ್ಜ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಫಾ.ಅನಿಶ್ ಪಾರಶೇರಿಲ್ ಮಾತನಾಡಿ ರವೀಂದ್ರನಾಥ ಠಾಗೋರ್ ಸಮಾಜಕ್ಕೆ ಕೇವಲ ಸಾಹಿತ್ಯಬದ್ಧ ಕವನಗಳನ್ನು ಮಾತ್ರ ನೀಡಿಲ್ಲ ಅವರು ಭಾರತದ ಶೈಕ್ಷಣಿಕ ನವೋದ್ಯಮದ, ಸಾಮಾಜಿಕ ಪ್ರಗತಿಯ, ಮಾನವೀಯ ತಾತ್ವಿಕ ಚಿಂತನೆಯ ಸ್ಮರಣೀಯ ಶಿಲ್ಪಿಯಾಗಿದ್ದರು. ಅವರ ಕೊಡುಗೆಗಳು ಇಂದೂ ಅಕ್ಷಯವಾಗಿವೆ ಎಂದು ಹೇಳಿದರು.
ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ಸಂಸ್ಥೆಯ ಸಂಚಾಲಕರಾದ ಫಾ. ನೋಮಿಸ್ ಕುರಿಯಾಕೋಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಎಂ.ಐ ತೋಮಸ್, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಹರಿಪ್ರಸಾದ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ರವೀಂದ್ರನಾಥ ಠಾಗೋರ್ ಅವರ ಕುರಿತು ಭಾಷಣ, ಕಥೆ, ಹಾಡುಗಳನ್ನು ಪ್ರಸ್ತುತಪಡಿಸಿದರು. ಅತಿಥಿಗಳು ರವೀಂದ್ರನಾಥ ಠಾಗೋರ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನವನ್ನು ಸಲ್ಲಿಸಿದರು.
ಶಿಕ್ಷಕಿ ಭವ್ಯ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕಿ ಅಹಿಷತ್ ಫಾಹಿಮಾ ವರದಿ ವಾಚಿಸಿದರು. ಶಿಕ್ಷಕ ವರ್ಗೀಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕಿ ಗೀತಾ ಪಿ.ಬಿ ವಂದಿಸಿದರು.










