


ಕೊಕ್ಕಡ: ಕನ್ಯಾಡಿ ಸೇವಾಭಾರತಿ ನೇತೃತ್ವದಲ್ಲಿ, ಸಬಲಿನಿ ಯೋಜನೆಯಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಡ್ಲೆ, ಗ್ರಾಮ ಪಂಚಾಯಿತಿ ನಿಡ್ಲೆ ಹಾಗೂ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ ನಿಡ್ಲೆ ಇವರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 34ನೇ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ ಸೋಮವಾರದಂದು ನಿಡ್ಲೆಯಲ್ಲಿ ನೆರವೇರಿತು.
ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಗೌಡ ಶಿಬಿರ ಉದ್ಘಾಟಿಸಿ ಮಾತನಾಡಿ, “ಯಾವಾಗಲೂ ಇನ್ನೊಬ್ಬರ ನೆರಳಿನಲ್ಲಿ ಬದುಕದೆ ಸ್ವ-ಉದ್ಯೋಗದ ಮೂಲಕ ಜೀವನ ಕಟ್ಟಿಕೊಳ್ಳಬೇಕು. ಈ ತರಬೇತಿ ಶಿಬಿರವು ಸ್ವ-ನಿರ್ಭರ ಜೀವನದತ್ತ ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು.
ಸೇವಾಭಾರತಿ ಕಾರ್ಯದರ್ಶಿ ಬಾಲಕೃಷ್ಣ ಅವರು ಮಹಿಳೆಯರು ಧೈರ್ಯದಿಂದ ಸ್ವಂತ ಉದ್ಯಮ ಆರಂಭಿಸಿದರೆ ಯಾವುದೇ ಗುರಿ ಅಸಾಧ್ಯವಲ್ಲ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮೋಹನ್ ಪೂಜಾರಿ, ಅಭಿವೃದ್ಧಿ ಅಧಿಕಾರಿ ದಿನೇಶ್, ಸದಸ್ಯೆ ಹೇಮಾವತಿ, ಟೈಲರಿಂಗ್ ತರಬೇತುದಾರ್ತಿ ರಜನಿ ಉಪಸ್ಥಿತರಿದ್ದರು.
ಒಟ್ಟು 32 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದ ಈ ಶಿಬಿರವು ಮಹಿಳಾ ಸಬಲಿಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕಾರ್ಯಕ್ರಮದಲ್ಲಿ ಹೇಮಾವತಿ ಸ್ವಾಗತಿಸಿದರು, ಸುಮ ಕಾರ್ಯಕ್ರಮ ನಿರೂಪಿಸಿದರು, ಸುಮನ ವಂದಿಸಿದರು.










