

ನೆಲ್ಯಾಡಿ: 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ಪ್ರತಿಭಾ ಪ್ರದರ್ಶನ , ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಕಾರ್ಯಕ್ರಮವು ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ “ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು ಬಿತ್ತುವಲ್ಲಿ ಹಾಗೂ ರಾಷ್ಟ್ರಧ್ವಜದ ಗೌರವ, ರಾಷ್ಟ್ರ ನಾಯಕರ ತ್ಯಾಗ ಬಲಿದಾನಗಳ ಪರಿಚಯ ನೀಡುವಲ್ಲಿ ಇಂತಹ ರಾಷ್ಟ್ರೀಯ ಹಬ್ಬಗಳು ಮಹತ್ತರವಾದವು” ಎಂದರು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಕೊಕ್ಕಡದ ನಿವೃತ್ತ ಶಿಕ್ಷಕಿ ಪ್ರಫುಲ್ಲ ಮಾತನಾಡಿ, “ಸ್ವಾತಂತ್ರ್ಯಕ್ಕಾಗಿ ಹಿರಿಯರು ಪಟ್ಟ ಪಾಡನ್ನು ಮರೆಯಬಾರದು. ವಿದ್ಯಾರ್ಥಿಗಳು ಹಿರಿಯರಿಗೆ ಗೌರವ ನೀಡಬೇಕು, ತಂದೆ, ತಾಯಿಗಳ ಮಾತು ಪಾಲಿಸಬೇಕು, ದುಶ್ಚಟಗಳಿಂದ ದೂರವಿರಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಪೂರ್ವ ವಿದ್ಯಾರ್ಥಿ ಹಾಗೂ ನಿವೃತ್ತ ಎನ್.ಎಸ್.ಜಿ. ಕಮಾಂಡೋ ಐಸಾಕ್ ಎಂ.ಜೆ. ತಮ್ಮ ಸೈನಿಕ ಜೀವನದ ಅನುಭವ ಹಂಚಿಕೊಂಡು “ಶಿಸ್ತು ಮತ್ತು ಸಮಯ ಪಾಲನೆಯಿಂದಲೇ ಜೀವನ ಯಶಸ್ವಿಯಾಗುತ್ತದೆ” ಎಂದು ಸಂದೇಶ ನೀಡಿದರು. ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಫಾ. ನೋಮಿಸ್ ಕುರಿಯಕೋಸ್ ಅಧ್ಯಕ್ಷತೆ ವಹಿಸಿದರು.
ಸಹಪಠ್ಯ ಚಟುವಟಿಕೆಗಳ ಆರಂಭ:
ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೆ.ಫಾ.ಅನೀಶ್ ಪಾರಶೆರಿಲ್ ಕರಾಟೆ, ಫಿಲ್ಮಿ ಡ್ಯಾನ್ಸ್, ಕೀಬೋರ್ಡ್, ಸುಗಮ ಸಂಗೀತ, ಚಿತ್ರಕಲೆ ಮುಂತಾದ ಪಠ್ಯೇತರ ತರಗತಿಗಳ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
ಸನ್ಮಾನ:
ಸಂಸ್ಥೆಯ ಪೂರ್ವ ವಿದ್ಯಾರ್ಥಿ ಹಾಗೂ ನಿವೃತ್ತ ಎನ್.ಎಸ್.ಜಿ. ಕಮಾಂಡೋ ಐಸಾಕ್ ಎಂ.ಜೆ.ಅವರನ್ನು ಸಂಸ್ಥೆ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಪ್ರಾಚಾರ್ಯ ಏಲಿಯಸ್ ಎಂ.ಕೆ. ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಚೇತನ್.ಟಿ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲಮಾಧ್ಯಮ ವಿಭಾಗದ ಮುಖ್ಯಸ್ಥ ಹರಿಪ್ರಸಾದ್.ಕೆ ವಂದಿಸಿದರು.
ಸಭೆಯ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು, ವಿದ್ಯಾರ್ಥಿನಿ ಜೆಸ್ಲಿನ್ ಅನ್ನಾ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.











