

ಉಜಿರೆ: ಹಲವು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಆ.21ರಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಆ.20ರಂದು ನೋಟಿಸ್ ನೀಡಲು ಹೋದಾಗ, ತಿಮರೋಡಿಯಲ್ಲಿ ಅವರ ಪರ ಮಂದಿ ಪೋಲಿಸರೊಂದಿಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಉಡುಪಿ ಜಿಲ್ಲಾ ಎಡಿಷನಲ್ ಎಸ್‌ಪಿ ಸುಧಾಕರ್ ಹೆಗ್ಡೆ ಅವರ ನೇತೃತ್ವದಲ್ಲಿ ಒಟ್ಟು 9 ಪೋಲಿಸ್ ವಾಹನಗಳಲ್ಲಿ ಭದ್ರತಾ ಬಂದೋಬಸ್ತಿನೊಂದಿಗೆ ಉಜಿರೆಯ ತಿಮರೋಡಿ ಅವರ ಮನೆಗೆ ಪೊಲೀಸರು ತೆರಳಿ, ವಾಗ್ವಾದದ ನಡುವೆ ಅವರನ್ನು ವಶಕ್ಕೆ ಪಡೆದು, ಗಿರೀಶ್ ಮಟ್ಟಣ್ಣ, ಜಯಂತ್ ಟಿ ಅವರನ್ನು ಕಾರಿನಲ್ಲಿ ಬಂದೋಬಸ್ ಮೂಲಕ ಬ್ರಹ್ಮಾವರ ಕಡೆಗೆ ಕರೆದುಕೊಂಡು ಹೋಗಲಾಗುತ್ತಿದೆ.
ಘಟನೆಯ ಮೂಲ ಆ.16ರಂದು ಫೇಸ್ಬುಕ್ ಪೇಜ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತೇಜೋವಧೆ ಮಾಡಿದರೆಂದು ದೂರಿದೆ. ಹಿಂದೂ ನಾಯಕನ ಅವಹೇಳನೆ ಮಾಡುವುದರ ಜೊತೆಗೆ, ಬೇರೆ ಬೇರೆ ಧರ್ಮ-ಸಮುದಾಯಗಳ ನಡುವೆ ವೈಮನಸ್ಸು, ದ್ವೇಷ ಭಾವನೆ ಉಂಟುಮಾಡಿದರೆಂಬ ಆರೋಪವಿದೆ.
ಈ ಕುರಿತು ರಾಜೀವ ಕುಲಾಲ್ ಉಡುಪಿ ಗ್ರಾಮಾಂತರ ಬಿಜೆಪಿ ಮುಂದಾಳತ್ವದಲ್ಲಿ ನೀಡಿದ ದೂರು ಆಧಾರವಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ, ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ನೇರವಾಗಿ ತಿಮರೋಡಿ ಮನೆಗೆ ಆಗಮಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.











