
ನೆಲ್ಯಾಡಿ: 65 ವರ್ಷದ ಇತಿಹಾಸ ಹೊಂದಿರುವ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ಸರ್ವತೋಮುಖ ಸಾಧನೆ ಮಾಡಿ ಶೇಕಡ 100 ಸಾಲ ವಸೂಲಾತಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಅ. 30ರಂದು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಸಂಘವನ್ನು ಗೌರವಿಸಲಾಯಿತು. ಸಂಘದ ಪರವಾಗಿ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಎಂ, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನಿರ್ದೇಶಕರು ಉಷಾ ಅಂಚನ್, ಭಾಸ್ಕರ ರೈ, ಶೇಷಮ್ಮ, ಬಾಬು ನಾಯ್ಕ, ಸಿಬ್ಬಂದಿ ಧನುಷ್ ಮೊದಲಾದವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿಯನ್ನು ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಉಪಾಧ್ಯಕ್ಷ ವಿನಯಕುಮಾರ್, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬಾಲ್ಯೋಟ್ಟು, ನಿರ್ದೇಶಕರು ಜಯರಾಮ್ ರೈ, ದೇವಿಪ್ರಸಾದ್ ಶೆಟ್ಟಿ, ಕುಶಾಲಪ್ಪ ಗೌಡ ಪೂವಜೆ ಹಾಗೂ ಇತರ ಗಣ್ಯರು ನೀಡಿದರು.
ಸಂಘವು ನಿರಂತರವಾಗಿ 9 ವರ್ಷಗಳಿಂದ ಪ್ರಶಸ್ತಿಗಳನ್ನು ಗಳಿಸುತ್ತಿದ್ದು, 2020ರಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ “ಜಿಲ್ಲಾ ಮಟ್ಟದಲ್ಲೇ ಉತ್ತಮ ಸಹಕಾರಿ ಸಂಘ” ಎಂಬ ಗೌರವವನ್ನು ಪಡೆದಿತ್ತು.
2024-25ನೇ ಸಾಲಿನಲ್ಲಿ ಸಂಘವು 552.59 ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸಿ 1.90 ಕೋಟಿ ರೂ. ಲಾಭ ಗಳಿಸಿದೆ. ಸಂಘದಲ್ಲಿ 6448 ಸದಸ್ಯರು ಇದ್ದು, 9.39 ಕೋಟಿ ರೂ. ಪಾಲು ಬಂಡವಾಳ, 33 ಕೋಟಿ ರೂ. ಠೇವಣಿ, 85 ಕೋಟಿ ರೂ. ಸದಸ್ಯರ ಸಾಲ, 116 ಕೋಟಿ ರೂ. ದುಡಿಯುವ ಬಂಡವಾಳವಿದೆ.
ಸಂಘವು ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ, ಗೋಳಿತೊಟ್ಟು, ಕೊಣಾಲು , ಅಲಂತಾಯ ಸೇರಿದಂತೆ 7 ಕಂದಾಯ ಗ್ರಾಮಗಳಲ್ಲಿ ಸೇವೆ ನೀಡುತ್ತಿದೆ. ಸಂಘದ ಕೇಂದ್ರ ಕಚೇರಿ, ಗೋಳಿತೊಟ್ಟು ಹಾಗೂ ಶಿರಾಡಿ ಶಾಖೆಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಚ್ಲಂಪಾಡಿ ಶಾಖೆಯಲ್ಲಿ ಪಡಿತರ ವ್ಯವಹಾರ ಮಾಡುತ್ತಿದೆ.
ಸಂಘದ ಆಡಳಿತ ಮಂಡಳಿಯಲ್ಲಿ 12 ಮಂದಿ ನಿರ್ದೇಶಕರಿದ್ದು, ಅಧ್ಯಕ್ಷರಾಗಿ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷರಾಗಿ ರವಿಚಂದ್ರ ಹೊಸವಕ್ಲು ನಿರ್ದೇಶಕರಾಗಿ ಜಯಾನಂದ ಬಂಟ್ರಿಯಾಲ್, ಸರ್ವೋತ್ತಮ ಗೌಡ, ಉಷಾ ಅಂಚನ್, ಜಿನ್ನಪ್ಪ ಗೌಡ, ಜನಾರ್ದನ ಗೌಡ ಬರೆಮೇಲು, ಸುಧಾಕರ ಬಿ, ಶೇಷಮ್ಮ, ಭಾಸ್ಕರ ರೈ, ಬಾಬು ನಾಯ್ಕ, ಹರೀಶ್ ಬಿ ಇದ್ದಾರೆ. ವಲಯ ಮೇಲ್ವಿಚಾರಕರಾಗಿ ವಸಂತ ಎಸ್, ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ದಯಾಕರ ರೈ ಕೆ.ಎಂ ಸೇವೆ ಸಲ್ಲಿಸುತ್ತಿದ್ದಾರೆ.










