

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಉಜ್ವಲ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ನಡೆಯಿತು.
ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಸಲಾಂ ಬಿಲಾಲ್ ಅವರು ಉದ್ಘಾಟಿಸಿ ಸಂಜೀವಿನಿ ಒಕ್ಕೂಟವು ಗ್ರಾಮ ಪಂಚಾಯಿತಿಯ ಅವಿಭಾಜ್ಯ ಅಂಗದಂತೆ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ನೈರ್ಮಲ್ಯ ಕಾಪಾಡುವಲ್ಲಿ, ಗ್ರಾಮೀಣ ಮಹಿಳೆಯರ ಜೀವನೋಪಾಯ ವೃದ್ಧಿಸುವ ಕಾರ್ಯಕ್ರಮಗಳನ್ನು ನಡೆಸುವಲ್ಲಿ, ಹಾಗೂ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ಬಲವರ್ಧನೆ ಮಾಡುವಲ್ಲಿ ಒಕ್ಕೂಟ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಪಂಚಾಯಿತಿ ಅಭಿವೃದ್ಧಿಗೆ ಪೂರಕವಾಗಿದೆ ಎಂಬುದು ಹೆಮ್ಮೆಗುರಿಯ ವಿಷಯ ಎಂದರು.
ನೆಲ್ಯಾಡಿ ಉಜ್ವಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ನಳಿನಾಕ್ಷಿ ಅವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ತಾಲೂಕು ವಲಯ ಮೇಲ್ವಿಚಾರಕಿ ನಮಿತಾ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಭಾರತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೀತಾ ಅವರು ವಿಮೆ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಲೀಲಾವತಿ ಅವರು ಮಹಿಳೆಯರ ಆರೋಗ್ಯ ಮತ್ತು ಪೌಷ್ಟಿಕತೆಯ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಒಕ್ಕೂಟದ ಅತ್ಯುತ್ತಮ ಸಂಘವನ್ನು ಹಾಗೂ ಒಕ್ಕೂಟದಿಂದ ಸಾಲ ಪಡೆದು ಸ್ವಉದ್ಯೋಗ ಮಾಡುವ ಮೂರು ಮಹಿಳೆಯರನ್ನು ವಿಶೇಷವಾಗಿ ಗೌರವಿಸಲಾಯಿತು.
ಕಾರ್ಯದರ್ಶಿ ಭವ್ಯ ವಾರ್ಷಿಕ ವರದಿ ವಾಚಿಸಿದರು. ವನಜಾ ಕಾರ್ಯಕ್ರಮ ನಿರೂಪಿಸಿದರು. ಪವಿತ್ರ ವಂದಿಸಿದರು.






