

ಸುಬ್ರಹ್ಮಣ್ಯ: ಕುಮಾರಧಾರ ನದಿಯ ಸೇತುವೆ ಮೇಲಿಂದ ಕಸ ಬಿಸಾಡಿದ ವ್ಯಕ್ತಿಗೆ ಗ್ರಾ.ಪಂ. ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ದಂಡ ವಿಧಿಸಿರುವ ಘಟನೆ ಸೆ.8ರಂದು ವರದಿಯಾಗಿದೆ.
ಕಾರಿನಿಂದ ಇಳಿದು ಮಹಿಳೆಯೊಬ್ಬರು ಸೇತುವೆ ಮೇಲಿಂದ ಕಸ ಬಿಸಾಡುತ್ತಿರುವ ದೃಶ್ಯವನ್ನು ಸ್ಥಳೀಯ ಯುವಕರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಪಂಚಾಯತ್ ಅಧಿಕಾರಿಗಳಿಗೆ ಹಂಚಿಕೊಂಡಿದ್ದರು. ನಂತರ ವಾಹನದ ವಿವರಗಳನ್ನು ಪೊಲೀಸರು ಪತ್ತೆಹಚ್ಚಿ ಮಾಲಿಕರನ್ನು ಗುರುತಿಸಲು ನೆರವಾದರು.
ಈ ಹಿನ್ನೆಲೆಯಲ್ಲಿ ಕಾರ್ಕಳದ ವೇದವ್ಯಾಸ ತಂತ್ರಿ ಎಂಬವರಿಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾನೂನು ಕ್ರಮ ಕೈಗೊಂಡು, ಕಸ ಬಿಸಾಡಿದ ಆರೋಪದಡಿಯಲ್ಲಿ ರೂ.2000 ದಂಡ ವಿಧಿಸಿದೆ.
ಸ್ಥಳೀಯರ ಸಹಕಾರದಿಂದ ಇಂತಹ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ, ಮುಂದೆಯಾದರೂ ಯಾರೂ ಇಂತಹ ತಪ್ಪು ಮಾಡಲು ಧೈರ್ಯಪಡಬಾರದು ಎಂಬ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ.






