

ನೆಲ್ಯಾಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನೆಲ್ಯಾಡಿ – ಕೌಕ್ರಾಡಿ ಭಾಗದಲ್ಲಿ ಜನರ ಬದುಕನ್ನೇ ಹಾಳುಮಾಡಿದೆ. ಕಾಮಗಾರಿ ಆರಂಭವಾದಾಗ ಜನರಲ್ಲಿ ಹುಟ್ಟಿದ್ದ ಸಂಭ್ರಮ ಈಗ ಮರೆಮಾಚಿದ್ದು, ಆ ಭಾಗದಲ್ಲಿ ಕೋಪ, ಆಖ್ರೋಶ ಮಡುಗಟ್ಟಿದೆ. ಹೆದ್ದಾರಿಯಲ್ಲಿ ಏಳುತ್ತಿರುವ ಧೂಳು ಜನ ಸಾಮಾನ್ಯರ ದಿನಚರಿಯನ್ನೇ ಕರಾಳವಾಗಿಸುತ್ತಿದೆ.

ಬಿ.ಸಿ. ರೋಡ್-ಅಡ್ಡಹೊಳೆ ನಡುವಿನ ನೆಲ್ಯಾಡಿ- ಕೌಕ್ರಾಡಿ ಭಾಗ ಹೊರತುಪಡಿಸಿ ಉಳಿದೆಡೆ ವಾಹನಗಳು ಸುಲಭವಾಗಿ ಓಡಾಡುತ್ತಿದ್ದರೆ, ನೆಲ್ಯಾಡಿ- ಕೌಕ್ರಾಡಿ ಭಾಗದ ಜನರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಜನರು ಇದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ವ್ಯಾಪಾರ, ವಿದ್ಯಾಭ್ಯಾಸ, ದೈನಂದಿನ ಸಂಚಾರ ಯಾವುದೂ ಸರಾಗವಾಗಿ ನಡೆಯದ ಸ್ಥಿತಿ ಇಲ್ಲಿದೆ. ಅನ್ಯಾಯ ತಡೆಗಟ್ಟಲು ಸ್ಥಳೀಯರು ಸೇರಿಕೊಂಡು ನೆಲ್ಯಾಡಿ – ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ರಚಿಸಿ ಪ್ರತಿಭಟನೆ, ಧರಣಿ, ಮನವಿ ಸಮರ್ಪಣೆ ಮಾಡಿದರೂ ಪರಿಹಾರ ಸಿಕ್ಕಿಲ್ಲ. ಸಂಸದರಿಂದ ಸಚಿವರವರೆಗೂ ನಿಯೋಗ ಹೋಗಿ ಬೇಡಿಕೆ ಇಟ್ಟರೂ ಫಲ ಸಿಕ್ಕಿಲ್ಲ.

ಸರ್ವಿಸ್ ರಸ್ತೆಯ ದುಃಸ್ಥಿತಿ:
ಜನರ ದೈನಂದಿನ ಬದುಕಿಗೆ ಅವಲಂಬನೆಯಾದ ಸರ್ವಿಸ್ ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಹೊಂಡ-ಗುಂಡಿಗಳಿಂದ ನರಕಯಾತ್ರೆಯಾಗಿದ್ದರೆ, ಈಗ ಮಳೆ ಕಡಿಮೆಯಾಗಿ ಇಡೀ ರಸ್ತೆ ಧೂಳಿನ ಸಮುದ್ರವಾಗಿದೆ. ಬಸ್ ನಿಲ್ದಾಣ, ಅಂಗಡಿ, ಶಾಲೆ, ವ್ಯಾಪಾರ ಕೇಂದ್ರಗಳ ಬಳಿ ಜನರೇ ಕಾಣಿಸದಷ್ಟು ಧೂಳು ಏರುತ್ತಿದೆ. ರಾಷ್ಟ್ರೀಯ ಹೆದ್ದಾರಿಯಾದ ಕಾರಣ ಟ್ರಕ್, ಲಾರಿ, ಬಸ್‌ಗಳ ಓಡಾಟ ಹೆಚ್ಚಿದ್ದು ಧೂಳು ಕೂಡ ಹೆಚ್ಚಾಗುತ್ತಿದೆ. ವ್ಯಾಪಾರಿಗಳು ಧ್ವನಿ ಎತ್ತಿದಾಗ ಗುತ್ತಿಗೆದಾರರು ಕೇವಲ ಹೊಂಡಗಳ ಮೇಲೆ ಜಲ್ಲಿ ಸುರಿದು ಕೈ ತೊಳೆದುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೆ ಅದೇ ಪರಿಸ್ಥಿತಿ.! ಈ ಮಾರ್ಗದಲ್ಲಿ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳುತ್ತಾರೆ. ಪರೀಕ್ಷೆಗಳ ಸಮಯವಾದ ಕಾರಣ ಅವರ ಸಂಕಟ ಹೇಳ ತೀರದಾಗಿದೆ.
ಸಂಸದರ ಭರವಸೆ:
ಇತ್ತೀಚೆಗೆ ನೆಲ್ಯಾಡಿಗೆ ಆಗಮಿಸಿದ್ದ ಸಂಸದರು, ಹೋರಾಟ ಸಮಿತಿ, ವರ್ತಕ ಸಂಘ ಮತ್ತು ಪಂಚಾಯಿತಿ ಪ್ರತಿನಿಧಿಗಳ ಬೇಡಿಕೆ ಆಲಿಸಿ, ಮೂರು ಅಂಡರ್‌ಪಾಸ್ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಕಾಮಗಾರಿ ಯಾವಾಗ ಆರಂಬ ಎಂಬುದು ಗೊತ್ತಾಗಿಲ್ಲ.






