ನೆಲ್ಯಾಡಿ ಜೇಸಿ ಸಪ್ತಾಹ ಸಮಾರೋಪ: ಯುವಕರಲ್ಲಿ ವ್ಯಕ್ತಿತ್ವ ವಿಕಾಸಕ್ಕೆ ಪ್ರೋತ್ಸಾಹ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಜೇಸಿಐ ಸಪ್ತಾಹ ಸಮಾರೋಪ ಕಾರ್ಯಕ್ರಮವು ಸೋಮವಾರ ಸಂಜೆ ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಅದ್ಧೂರಿಯಾಗಿ ಜರಗಿತು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಜೇಸಿಐ ಭಾರತ ವಲಯ 15ರ ಆಡಳಿತ ವಿಭಾಗದ ವಲಯ ನಿರ್ದೇಶಕ ಅಜಿತ್ ಕುಮಾರ್ ರೈ ಮಾತನಾಡಿ, ಜೇಸಿಐ ಸಂಸ್ಥೆಯು 18 ರಿಂದ 40 ವರ್ಷದೊಳಗಿನ ಯುವಕರಿಗಾಗಿ ಕಾರ್ಯನಿರ್ವಹಿಸುವ ಪ್ರಖ್ಯಾತ ವೇದಿಕೆ. ಸಾರ್ವಜನಿಕ ಕಾರ್ಯಚಟುವಟಿಕೆಗಳ ಮೂಲಕ ಯುವಕರಿಗೆ ಉತ್ತಮ ಮಾರ್ಗದರ್ಶನ, ನಾಯಕತ್ವ ಹಾಗೂ ಜೀವನದಲ್ಲಿ ಯಶಸ್ವಿಯಾಗಲು ಅಗತ್ಯವಾದ ತರಬೇತಿ ಇಲ್ಲಿ ದೊರೆಯುತ್ತದೆ. ಈ ವರ್ಷ ನೆಲ್ಯಾಡಿ ಜೇಸಿಐ ಉತ್ತಮ ಸೇವಾ ಚಟುವಟಿಕೆಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಡಿಪು ಕೆಎಸ್‌ಆರ್‌ಟಿಸಿ ಚಾಲನಾ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಮುರಳೀಧರ ಆಚಾರ್ಯ ಮಾತನಾಡಿ, ಜೇಸಿ ಸಂಸ್ಥೆಯಲ್ಲಿ ದೊರೆಯುವ ವ್ಯಕ್ತಿತ್ವ ವಿಕಾಸ ತರಬೇತಿಗಳು ಉದ್ಯೋಗ ಸಂದರ್ಶನಗಳಲ್ಲಿ ಬಹಳ ಸಹಾಯಕ. ಯುವಜನಾಂಗವು ಈ ಸಂಸ್ಥೆಗೆ ಸೇರಿ ತಮ್ಮ ಜೀವನವನ್ನು ಉತ್ತಮ ಮಾರ್ಗದಲ್ಲಿ ರೂಪಿಸಬೇಕು ಎಂದು ಕರೆ ನೀಡಿದರು.

ಜೇಸಿಐ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಫಾ.ನೋಮಿಸ್ ಕುರಿಯಾಕೋಸ್, ನಿಕಟಪೂರ್ವ ಅಧ್ಯಕ್ಷೆ ಸುಚಿತ್ರ ಜೆ ಬಂಟ್ರಿಯಾಲ್, ಮಹಿಳಾ ಜೇಸಿ ಅಧ್ಯಕ್ಷೆ ಪ್ರವೀಣಿ ಸುಧಾಕರ ಶೆಟ್ಟಿ, ಯೋಜನಾ ನಿರ್ದೇಶಕರಾದ ಪುರಂದರ ಗೌಡ ಡೆಂಜ, ವಿನ್ಯಾಸ್ ಬಂಟ್ರಿಯಾಲ್, ಕಾರ್ಯದರ್ಶಿ ನವ್ಯ ಪ್ರಸಾದ್ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ನೆಲ್ಯಾಡಿ ವತಿಯಿಂದ “ನಗಬೇಕು ಆಗಾಗ ಬದುಕಿನೊಳಗೆ” ಶೀರ್ಷಿಕೆಯ ಸಂಗೀತ, ನೃತ್ಯ ಮತ್ತು ಹಾಸ್ಯ ಕಾರ್ಯಕ್ರಮವನ್ನು ಆರ್ಯಭಟ್ಟ ಪ್ರಶಸ್ತಿ ವಿಜೇತ ವಿಶ್ವನಾಥ್ ಶೆಟ್ಟಿ ಕೆ ಅವರು ನಡೆಸಿರು. ಬಳಿಕ ಡಾ.ಸದಾನಂದ ಕುಂದರ್ ಅವರು ಜೇಸಿಐ ಕುಟುಂಬೋತ್ಸವ, ಜೇಸಿ, ಜೇಸಿರೆಟ್ ಮತ್ತು ಜೂನಿಯರ್ ಜೇಸಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತ ಸ್ಪರ್ಧೆಗಳಿಗೆ ಬಹುಮಾನ ವಿತರಿಸಿದರು.

ಸಭಾ ವೇದಿಕೆಯಲ್ಲಿ ಸಾಧನ ಶ್ರೀ ಪುರಸ್ಕೃತ ಮೋಹನ್ ವಿ. ಗೌಡ ಅವರನ್ನು ಗೌರವಿಸಲಾಯಿತು. ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷ ಮೋಹನ್ ಕುಮಾರ್ ಡಿ ಅವರಿಗೆ ಕಮಲ ಪತ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಲ್ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಸುಪ್ರೀತಾ ರವಿಚಂದ್ರ ಜೇಸಿವಾಣಿ ವಾಚಿಸಿದರು. ವಿ. ಆರ್. ಹೆಗ್ಡೆ, ಲೀಲಾ ಮೋಹನ್, ದಯಾಕರ ರೈ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ನವ್ಯ ಪ್ರಸಾದ್ ವಂದಿಸಿದರು.

  •  

Leave a Reply

error: Content is protected !!