ಕೊಕ್ಕಡ: ಕಾವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಾದ್ವಾರ ಶಿಲಾನ್ಯಾಸ – ಉಚಿತ ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರ

ಶೇರ್ ಮಾಡಿ

ಕೊಕ್ಕಡ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾವು ತ್ರಿಗುಣಾತ್ಮಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 5 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಹಾದ್ವಾರದ ಶಿಲಾನ್ಯಾಸ ಕಾರ್ಯಕ್ರಮವು ಭಾನುವಾರ ಬೆಳಿಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ದೇವಸ್ಥಾನದ ಅರ್ಚಕ ಮಂಜುನಾಥ ಭಟ್ ಹಾಗೂ ತಂಡದವರ ಪೌರೋಹಿತ್ಯದಲ್ಲಿ ಹಿಂದೂ ಧಾರ್ಮಿಕ ಮುಖಂಡ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಅವರು ಮಹಾದ್ವಾರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಶ್ರೀ ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ದೇವಸ್ಥಾನವು ಅತ್ಯಂತ ಕಾರಣಿಕವುಳ್ಳ ದೇವಿ ದೇವಸ್ಥಾನವಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳ ಅಭಿಲಾಷೆಯಂತೆ ಜಗನ್ಮಾತೆಯ ಅನುಗ್ರಹದಿಂದ ನಿರ್ಮಾಣವಾಗಲಿರುವ ಈ ನೂತನ ಮಹಾದ್ವಾರವು ಶೀಘ್ರದಲ್ಲೇ ಆಕರ್ಷಕ ರೂಪ ಪಡೆಯಲಿ ಎಂದು ಅವರು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಸೈಂಟ್ ಜೋನ್ಸ್ ಮೆಡಿಕಲ್ ಕಾಲೇಜ್ ನ ಸೀನಿಯರ್ ಸೋಶಿಯಲ್ ಸೈಂಟಿಸ್ಟ್ ರತ್ನ ಕುಮಾರಿ. ಎಸ್ ಉಪಸ್ಥಿತರಿದ್ದರು. ದೇವಸ್ಥಾನ ಆಡಳಿತ ಟ್ರಸ್ಟ್ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಪೂವಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ಲರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪವಿತ್ರಪಾಣಿ ಸೂರ್ಯನಾರಾಯಣ ಯಡಪಡಿತ್ತಾಯ, ನವರಾತ್ರಿ ನಿರ್ವಹಣಾ ಸಮಿತಿ ಅಧ್ಯಕ್ಷ ದೇವರಾಜ್ ಹೊಸಹೊಕ್ಲು ಹಾಗೂ ಸದಸ್ಯರು, ದುರ್ಗಾವಾಹಿನಿ ಮಹಿಳಾ ತಂಡದ ಅಧ್ಯಕ್ಷೆ ಶಶಿಕಲಾ ಹಾಗೂ ಸದಸ್ಯರು, ಕಾವು ಯುವಕೇಸರಿ ಅಧ್ಯಕ್ಷ ರಘು ಗೌಡ ಹಾಗೂ ಸದಸ್ಯರು, ದೇವಸ್ಥಾನ ಆಡಳಿತ ಟ್ರಸ್ಟ್ ಸದಸ್ಯರು ಹಾಗೂ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು. ಟ್ರಸ್ಟ್ ನ ಕೋಶಾಧಿಕಾರಿ ಡಾ. ಗಣೇಶ್ ಪ್ರಸಾದ್ ವಂದಿಸಿದರು. ಸದಸ್ಯರು ಜನಾರ್ಧನ ಮೂಡುಬೈಲು, ಜಿನ್ನಪ್ಪ ಗೌಡ ಮೊದಲಾದವರು ಸಹಕರಿಸಿದರು.

ಉಚಿತ ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರ:
ಇದೇ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಉಚಿತ ನೇತ್ರ ತಪಾಸಣಾ ಹಾಗೂ ರಕ್ತದಾನ ಶಿಬಿರವನ್ನು  ಆಯೋಜಿಸಲಾಗಿತ್ತು. ಪುತ್ತೂರು ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆ, ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್, ಮಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂದತ್ವ ನಿವಾರಣ ವಿಭಾಗ), ಬೆಂಗಳೂರು ಡಾ.ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಸೆಂಚುರಿ ಗ್ರೂಪ್ ಇವರ ಸಹಕಾರದೊಂದಿಗೆ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಈ ಶಿಬಿರದಲ್ಲಿ ಸುಮಾರು 35ಯೂನಿಟ್ ರಕ್ತ ಸಂಗ್ರಹಗೊಂಡಿದ್ದು, ನೂರಕ್ಕೂ ಹೆಚ್ಚು ಮಂದಿ ಕಣ್ಣಿನ ತಪಾಸಣೆಯಿಂದ ಪ್ರಯೋಜನ ಪಡೆದರು.

  •  

Leave a Reply

error: Content is protected !!