

ನೆಲ್ಯಾಡಿ: ಗ್ರಾಮೀಣ ಪ್ರದೇಶದ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿತನವನ್ನು ಬೆಳೆಸುವ ಉದ್ದೇಶದಿಂದ ಉಜಿರೆಯ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ಆಯೋಜಿಸಲಾದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವು ಪುದುವೆಟ್ಟು ಗ್ರಾಮದ ಎಸ್‌ಡಿಎಂ ಅನುದಾನಿತಾ ಪ್ರಾಥಮಿಕ ಶಾಲೆಯಲ್ಲಿ ಆರಂಭವಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಪೂರ್ಣಾಕ್ಷ ಅವರು ಪುದುವೆಟ್ಟಿನಂತಹ ಗ್ರಾಮೀಣ ಪ್ರದೇಶದಲ್ಲಿ ಯುವ ವಿದ್ಯಾರ್ಥಿಗಳು ಶ್ರಮದಾನ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿರುವುದು ಅತ್ಯಂತ ಸಂತೋಷದ ವಿಚಾರ. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಬದುಕಿನ ಅರಿವು ಮೂಡಿಸಲು ಸಹಕಾರಿ ಎಂದರು.
ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಅವರು, ಎನ್‌ಎಸ್‌ಎಸ್ ಎಂದರೆ ಕೇವಲ ಶ್ರಮದಾನವಲ್ಲ ಅದು ವ್ಯಕ್ತಿತ್ವ ವಿಕಸನದ ಪಾಠಶಾಲೆ. ಶಿಬಿರಗಳ ಮೂಲಕ ವಿದ್ಯಾರ್ಥಿಗಳಿಗೆ ಬದುಕುವ ಕಲೆ, ಸಹಕಾರ, ಸೇವಾ ಮನೋಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಅರಿವು ನೀಡಲಾಗುತ್ತದೆ. ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಶಾಲಾ ಆವರಣದ ಸ್ವಚ್ಛತೆ, ಕೈತೋಟ ನಿರ್ಮಾಣ, ನೀರಾವರಿ ವ್ಯವಸ್ಥೆ ಮುಂತಾದ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ ಅಲ್ಲದೆ ಶಿಬಿರದ ಅವಧಿಯಲ್ಲಿ ತಜ್ಞರಿಂದ ಕೃಷಿ ತಂತ್ರಜ್ಞಾನ, ಪರಿಸರ ಸಂರಕ್ಷಣೆ, ವಿದ್ಯುತ್ ಉಪಕರಣಗಳ ಸುರಕ್ಷಿತ ಬಳಕೆ ಹಾಗೂ ನವೀನ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡ, ಎಸ್‌ಡಿಎಂ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶೀನಪ್ಪ ಗೌಡ, ನಿವೃತ್ತ ಶಿಕ್ಷಕ ಶ್ರೀಧರ್ ನಾಯರ್, ಪ್ರಗತಿಪರ ಕೃಷಿಕ ಚಿತ್ತರಂಜನ್ ಜೈನ್, ಹಾಲು ಉತ್ಪಾದಕರ ಸಂಘದ ರಂಗನಾಥ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಶಿಧರ್ ಹಾಗೂ ಎಪಿಎಂಸಿ ಮಾಜಿ ಸದಸ್ಯ ಅಬ್ದುಲ್ ಗಫೂರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರಕಾಶ್ ಗೌಡ ಹಾಗೂ ಉಪಯೋಜನಾಧಿಕಾರಿಗಳಾದ ಲೋಹಿತ್ ಎಸ್ ಮತ್ತು ಪುಷ್ಪಲತಾ ಉಪಸ್ಥಿತರಿದ್ದರು. ಶಿಬಿರಾರ್ಥಿನಿ ಮಂಜೂಷ ಸ್ವಾಗತಿಸಿದರು, ಭವಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಮಾನ್ಯ ವಂದಿಸಿದರು.






