ಧಾರಕಾರ ಮಳೆಯಿಂದ ನೆಲ್ಯಾಡಿ ತತ್ತರ – ದೀಪಾವಳಿ ಸಂಭ್ರಮಕ್ಕೆ ಮಳೆ ನೀರೆರೆದು, ಹೆದ್ದಾರಿ ಹಾಗೂ ದೇವಾಲಯದಲ್ಲಿ ಅವ್ಯವಸ್ಥೆ!

ಶೇರ್ ಮಾಡಿ

ನೆಲ್ಯಾಡಿ: ಕಳೆದ ರಾತ್ರಿ ತಾಲೂಕಿನ ವಿವಿಧ ಭಾಗಗಳಲ್ಲಿ ಸುರಿದ ಧಾರಕಾರ ಮಳೆಯಿಂದ ದೀಪಾವಳಿಯ ಸಂಭ್ರಮಕ್ಕೂ ಅಡ್ಡಿಯುಂಟಾಗಿ ಸಾರ್ವಜನಿಕ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಸುಮಾರು 5 ಗಂಟೆಗಳ ಕಾಲ ಸುರಿದ ನಿರಂತರ ಮಳೆಯ ಪರಿಣಾಮವಾಗಿ ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನುಗ್ಗಿದ ಘಟನೆಯೂ ನಡೆದಿದೆ.

ಹೆದ್ದಾರಿಯಲ್ಲಿ ನೀರು – ಸಂಚಾರಕ್ಕೆ ತಡೆ
ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಕಾಂಚನ ಕ್ರಾಸ್ ಸಮೀಪ ತೋಡಿನಲ್ಲಿ ನೀರು ಉಕ್ಕಿ ರಸ್ತೆಮೇಲೆ ಹರಿದುಬಂದ ಪರಿಣಾಮ, ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹೆದ್ದಾರಿ ಅಗಲೀಕರಣ ವೇಳೆ ತೋಡಿಗೆ ಮಣ್ಣು ತುಂಬಿರುವುದರಿಂದ ತೋಡಿನ ಅಗಲ ಕಡಿಮೆಯಾಗಿದ್ದು, ಪಕ್ಕದ ಗುಡ್ಡ ಹಾಗೂ ರಸ್ತೆಯಿಂದ ಹರಿದುಬಂದ ಮಳೆನೀರು ತೋಡಿನಲ್ಲಿ ತಡೆಯಾಗಿ ರಸ್ತೆಮೇಲೆ ಹರಿಯಿತು. ಎರಡು ಅಡಿ ಎತ್ತರದ ನೀರು ರಸ್ತೆಯಲ್ಲಿ ನಿಂತಿದ್ದರಿಂದ ವಾಹನಗಳು ಚಲಿಸಲಾರದ ಸ್ಥಿತಿ ಉಂಟಾಯಿತು.

ಪಡುಬೆಟ್ಟು ದೇವಾಲಯದೊಳಗೆ ನುಗ್ಗಿದ ನೀರು
ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಒಳಾಂಗಣಕ್ಕೆ ನೀರು ನುಗ್ಗಿ ಅವ್ಯವಸ್ಥೆ ಉಂಟಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ತೋಡಿಗೆ ದೇವಸ್ಥಾನದಿಂದ ಸ್ವಲ್ಪ ಕೆಳ ಭಾಗದಲ್ಲಿ ಕಿಂಡಿಅಣೆಕಟ್ಟು ಮಾಡಲಾಗಿದೆ. ಇದರಲ್ಲಿ ಕಸ ಕಡ್ಡಿಗಳು ತುಂಬಿಕೊಂಡಿದ್ದು ನೀರು ಸರಾಗವಾಗಿ ಹರಿದುಹೋಗಲು ಅಡ್ಡಿಯಾಗುತ್ತಿದೆ. ಕಳೆದ ರಾತ್ರಿ ಸುರಿದ ಧಾರಕಾರ ಮಳೆಯ ನೀರು ತೋಡಿನಲ್ಲಿ ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೇ ದೇವಸ್ಥಾನದ ಒಳಾಂಗಣ, ಹಾಲ್ ಅಡುಗೆ ಕೋಣೆಯೊಳಗೆ ನುಗ್ಗಿದೆ. ಇಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಸಂಗ್ರಹಿಸಿಟ್ಟಿದ್ದ ಸಿಮೆಂಟ್ ಚೀಲಗಳು ಮಳೆನೀರಿಗೆ ಒದ್ದೆಯಾಗಿದೆ. ಹೊಯಿಗೆ ಮಳೆ ನೀರಿನೊಂದಿಗೆ ಕೊಚ್ಚಿಹೋಗಿದೆ. ಪಕ್ಕದ ತೋಟ, ಗದ್ದೆಗಳಿಗೂ ನೀರು ನುಗ್ಗಿ ಹಾನಿಯಾಗಿದೆ.

ರಸ್ತೆಗಳಲ್ಲಿ ಹರಿದ ನೀರು:
ಮಳೆಯ ಪ್ರಮಾಣ ಹೆಚ್ಚಿದ್ದರಿಂದ ನೆಲ್ಯಾಡಿ–ಮಾದೇರಿ ರಸ್ತೆಯ ಕೊಲ್ಯೊಟ್ಟು ಭಾಗದಲ್ಲಿಯೂ ತೋಡಿನಲ್ಲಿ ನೀರು ಉಕ್ಕಿ ಬಂದು ರಸ್ತೆಮೇಲೆ ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿತು. ಕೆಲವು ಕಡೆಗಳಲ್ಲಿ ಚರಂಡಿಗಳು ಬ್ಲಾಕ್ ಆಗಿದ್ದರಿಂದ ನೀರು ರಸ್ತೆಯಲ್ಲೇ ಹರಿಯುತ್ತಿದ್ದರೆ, ಹಲವು ತೋಟಗಳು ಮತ್ತು ಗದ್ದೆಗಳು ನೀರಿನಿಂದ ಮುಳುಗಿದವು.

  •  

Leave a Reply

error: Content is protected !!